Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ? ಮೂವರು ನಾಯಕರ ನಡುವೆ ಭಾರಿ ಪೈಪೋಟಿ

---Advertisement---

ಸುದ್ದಿಒನ್,ಬೆಂಗಳೂರು,ಜೂನ್.1: ರಾಜ್ಯ ರಾಜಕಾರಣದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಸಿಗಲಿದೆ ಎಂಬ ಚರ್ಚೆ ಜೋರಾಗಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ತೆರವಾಗಲಿರುವ ಈ ಮಹತ್ವದ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ವಲಯದಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಈಗಾಗಲೇ ಮೂವರು ಪ್ರಮುಖ ನಾಯಕರು ಈ ರೇಸ್‌ನಲ್ಲಿದ್ದು, ದೆಹಲಿ ಮಟ್ಟದಲ್ಲಿ ಭರ್ಜರಿ ಲಾಬಿ ನಡೆಸುತ್ತಿದ್ದಾರೆ.

ಅಹಿಂದ ಕೋಟಾದಡಿ ಸತೀಶ್ ಜಾರಕಿಹೊಳಿ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಪಟ್ಟು ಹಿಡಿದಿದ್ದಾರೆ. ಸಚಿವ ಸ್ಥಾನದ ಜೊತೆಗೆ ಪಕ್ಷದ ಸಾರಥ್ಯವೂ ತಮಗೇ ಸಿಗಬೇಕು ಎಂಬುದು ಇವರ ಬೇಡಿಕೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ.

ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಒಬಿಸಿ ಸಮುದಾಯದ ಸಮೀಕರಣವನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ಇವರಿಗಾಗಿ ಚರ್ಚೆಗಳು ನಡೆಯುತ್ತಿವೆ.

ಈ ಇಬ್ಬರು ನಾಯಕರ ಪೈಪೋಟಿಯ ನಡುವೆ ಶಿವರಾಜ್ ತಂಗಡಗಿ ಅವರು ಕೂಡ ತಮಗೊಂದು ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ ವರಿಷ್ಠರು ಈಗಾಗಲೇ ತಂಗಡಗಿ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮೂವರೂ ನಾಯಕರು ತಮ್ಮದೇ ಆದ ಲೆಕ್ಕಾಚಾರಗಳೊಂದಿಗೆ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಸದ್ಯಕ್ಕಂತೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕದನ ಕುತೂಹಲ ಮೂಡಿಸಿದ್ದು, ಅಂತಿಮವಾಗಿ ಕಾಂಗ್ರೆಸ್ ವರಿಷ್ಠರು ಯಾರಿಗೆ ಪಟ್ಟ ಕಟ್ಟಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Join WhatsApp

Join Now

Join Telegram

Join Now