ಮೈಸೂರು: ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಗಲಾಟೆ ತಾರಕಕ್ಕೇರಿದೆ. ಈ ಬಗ್ಗೆ ಎಂಎಲ್ಸಿ ವಿಶ್ವನಾಥ್ ಮಾತನಾಡಿದ್ದು, ಇಂಥ ಸಮಯದಲ್ಲಿ ಧ್ವನಿ ಎತ್ತದೆ ಧರ್ಮಗುರು, ಧಾರ್ಮಿಕ ಮುಖಂಡರು ಎಲ್ಲಿ ಹೋಗಿದ್ದಾರೆಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದುಗೆ ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿ ಮೂಡಿದ್ದರು ಧ್ವನಿ ಎತ್ತುತ್ತಿಲ್ಲ. ಕೇವಲ ಅನುದಾನಕ್ಕಾಗಿ ನೀವೂ ಸೀಮಿತವಾದರೆ ಹೇಗೆ..? ಈ ವೇಳೆ ಮಠಾಧೀಶರು, ಧರ್ಮಗುರುಗಳು ಧ್ವನಿ ಎತ್ತದೆ ಇರುವುದು ದುರಂತವೇ ಸರಿ. ಈ ವಿಚಾರವಾಗಿ ಎಲ್ಲಾ ಧರ್ಮಗುರುಗಳು ಒಟ್ಟಾಗಿ ಕುಳಿತು ಚರ್ಚೆ ಮಾಡಬೇಕಿತ್ತು.
ಹಿಜಾಬ್ ಕೇಸರಿ ಶಾಲಿಗಿಂತ ಶಿಕ್ಷಣ ಮುಖ್ಯ. ಆದ್ರೆ ಈಗ ಹಿಂದೂ ಮತ್ತು ಮುಸ್ಲಿಂ ಮತೀಯವಾದ ವಿಜೃಂಭಿಸುತ್ತಿದೆ. ಬಿಜೆಪಿಯ ಕೆಲವು ವಿಂಗ್ ಗಳು ಕೇಸರಿ ಶಾಲಿನ ವಿಚಾರದಲ್ಲಿ ಗಲಾಟೆ ಮಾಡುತ್ತಿವೆ.
ಕೆಲ ಮುಸ್ಲಿಂ ಮತಾಂಧರರು ಹಿಜಬ್ ಹೆಸರಿನಲ್ಲಿ ಗಲಾಟೆ ಸೃಷ್ಟಿಸಿವೆ. ವೋಟಿನ ಸಲುವಾಗಿ ಮಕ್ಕಳ ಭವಿಷ್ಯದಲ್ಲಿ ಆಟವಾಡಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ವೋಟಿನ ರಾಜಕಾರಣ ಮಾಡಬೇಡಿ. ಮೂರು ಜನ ಕಲ್ಲು ಹೊಡೆದರೆಂದು ಶಾಲೆ ಮುಚ್ಚಿದ್ದು ತಪ್ಪು. ಕಲ್ಲು ತೂರಿದವರನ್ನು ಹಿಡಿದು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.