ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.21): ಪಾಂಡುರಂಗಸ್ವಾಮಿ ಯಾವತ್ತು ನಂಬಿದವರನ್ನು ಕೈಬಿಡುವುದಿಲ್ಲ. ಇದೊಂದು ಪುಣ್ಯಸ್ಥಳವಾಗಲಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ಪಟ್ಟಣದಲ್ಲಿ ಪಾಂಡುರಂಗ ರುಕುಮಾಯಿ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎರಡನೆ ಬಾರಿಗೆ ನಾನು ಶಾಸಕನಾಗಿದ್ದಾಗ ಕುಟುಂಬದೊಂದಿಗೆ ಪಾಂಡುರಂಗಸ್ವಾಮಿ ದೇವಸ್ಥಾನಕ್ಕೆ ಹೋದಾಗಲೆ ಗೊತ್ತಾಗಿದ್ದು, ಅಲ್ಲಿ ಪವಾಡವಿದೆ ಎಂದು. ಸಮೀಪದಲ್ಲಿಯೇ ಇದ್ದ ಪುಂಡಲೀಕ ದೇವರ ದರ್ಶನವನ್ನು ಮಾಡಿಕೊಂಡು ಬಂದೆವು. ಸಂಪತ್ತು, ಐಶ್ವರ್ಯ ಯಾವುದು ಸ್ಥಿರವಲ್ಲ. ಅಧಿಕಾರ ಇದ್ದಾಗ ನಾಲ್ಕು ಜನಕ್ಕೆ ಏನು ಒಳ್ಳೆಯದು ಮಾಡುತ್ತೇವೆಯೋ ಅದೇ ಕೊನೆಯವರೆಗೂ ಉಳಿಯುವುದು ಎಂದು ಹೇಳಿದರು.
ದೇವಸ್ಥಾನಕ್ಕೆ ಉತ್ತರದ ಭಾಗ ಒಳ್ಳೆಯದು. ಪಕ್ಕದಲ್ಲಿಯೇ ಗಂಗಾಮಾತೆ ಪುಷ್ಕರಣಿಯಿದೆ. ಈ ಜಾಗ ಪಾಂಡುರಂಗಸ್ವಾಮಿಗೆ ಮೀಸಲಿರಲಿ. ಇಲ್ಲಿ ದೇವಸ್ಥಾನ ಕಟ್ಟುವುದರಿಂದ ಊರಿಗೆ ಒಳ್ಳೆಯದಾಗುತ್ತದೆ. ಐದು ಲಕ್ಷ ರೂ.ದೇವಸ್ಥಾನಕ್ಕೆ ಕೊಡುತ್ತೇನೆಂದು ವಾಗ್ದಾನ ಮಾಡಿದ ಶಾಸಕ ಎಂ.ಚಂದ್ರಪ್ಪ ಮುಂದೆ ಅವಕಾಶ ಕೊಟ್ಟರೆ ಇನ್ನು ದೊಡ್ಡ ಮಟ್ಟದಲ್ಲಿ ದೇವಸ್ಥಾನ ಅಭಿವೃದ್ದಿಪಡಿಸೋಣ ಎಂದರು.
29 ವರ್ಷದ ಹಿಂದೆಯೆ ಭರಮಸಾಗರದಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದಾಗ 396 ಹಳ್ಳಿಗಳಲ್ಲಿ ಟಾರ್ ರಸ್ತೆ ಮಾಡಿಸಿದ್ದರಿಂದ ರಸ್ತೆರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೆ ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಅಂದುಕೊಂಡು ಹಗಲು-ರಾತ್ರಿ ಕ್ಷೇತ್ರದ ಜನರ ಸೇವೆ ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತೇನೆಂದರು.
ಹೊಳಲ್ಕೆರೆ ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರುಗಳಾದ ಪಿ.ಹೆಚ್.ಮುರುಗೇಶ್, ಶ್ರೀಮತಿ ಹೆಚ್.ಆರ್.ನಾಗರತ್ನ ವೇದಮೂರ್ತಿ, ಮಹೇಶ್ ಹೆಚ್. ಹೊಳಲ್ಕೆರೆ ತಾಲ್ಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವಿಠೋಬರಾವ್ ಗುಜ್ಜಾರ್, ಮಿರಜ್‍ಕರ್ ಶ್ರೀನಾಥ್, ಶಿವರುದ್ರಪ್ಪ, ರವಿಕುಮಾರ್, ನಟರಾಜ್, ಸಂತೋಷ್, ಗಿರೀಶಣ್ಣ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರು, ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.