ಸುದ್ದಿಒನ್, ಚಿತ್ರದುರ್ಗ, ನವೆಂಬರ್.18 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “68ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು” ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಅಹ್ವಾನಿತರಾಗಿ ಆಗಮಿಸಿದ ಹೆಸರಾಂತ ಹಿರಿಯ ಸಾಹಿತಿ ಡಾ.ಬಿ.ಎಲ್. ವೇಣು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಭಾಷೆ ಹಿರಿತನಕ್ಕೆ ಹೆಸರಾಗಿದ್ದು, ಸರಳ, ಸುಲಲಿತವಾದ ಭಾಷೆ ಹಲವಾರು ಕವಿವರೇಣ್ಯರೂ ಈ ನಾಡಲ್ಲಿ ಜನಿಸಿ ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿ ಸಾರ್ಥಕತೆಯನ್ನು ಮೆರೆದಿದ್ದಾರೆ.
ತನ್ನದೇ ಆದ ಪ್ರಾಚೀನ ಹಿನ್ನೆಲೆಯನ್ನು ಹೊಂದಿರುವ ಭಾಷೆ, ಇಂದು ತನ್ನ ಅಸ್ತ್ತಿತ್ವವನ್ನೇ ಕಳೆದುಕೊಳ್ಳುವ ಹಾದಿಯಲ್ಲಿ ಸಾಗುತ್ತಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ವಿಪರ್ಯಾಸವೇ ಸರಿ. ಅತ್ತ ಎನ್ನಡ, ಇತ್ತ ಎಕ್ಕಡ. ಮಧ್ಯೆ ಕನ್ನಡ ಗಡಗಡ ಹೀಗೆ ನಮ್ಮ ನಾಡು, ಭಾಷೆ ಹಲವಾರು ಭಾಷೆಗಳ ಮಧ್ಯೆ ಸಿಲುಕಿ ನರಳುವ ಸ್ಥಿತಿಗೆ ತಲುಪಿದೆ.
ನಾವುಗಳು ಕೇವಲ ನವೆಂಬರ್ ಕನ್ನಡಿಗರಾಗದೇ ಭಾಷೆಯ ಉಳಿವಿಗಾಗಿ ಹೋರಾಟದ ಕಿಚ್ಚು ಒಂದೆಡೆಯಾದರೆ ನಾವು ಕುಡಿಯುವ ನೀರಿಗೆ ಬೇರೆ ರಾಜ್ಯದ ಅನುಮತಿ ಪಡೆಯುವ ಮಟ್ಟಕ್ಕೆ ತಲುಪಿದ್ದೇವೆ. ನಮ್ಮ ಜೀವನದ ಭಾಷೆ ಯಾವುದೇ ಆಗಿದ್ದರೂ ಜೀವದ ಭಾಷೆ ಕನ್ನಡವಾಗಿರಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಭಾವಿ ಪ್ರಜೆಗಳಾದ ಮಕ್ಕಳೇ ನಿಮ್ಮ ಕೈಯಲ್ಲಿದೆ.
ಇಂದು ಈ ಶಾಲೆಯಲ್ಲಿ 2022-23ನೇ ಸಾಲಿನ 10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳನ್ನು ಗಳಿಸಿ ಕನ್ನಡ ಭಾಷೆಗೆ ಕೀರ್ತಿ ತಂದಿದ್ದಾರೆ ಎಂದರು. ನಿಮ್ಮ ಕನ್ನಡದ ಉಳಿವಿನ ಹೋರಾಟ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿರದೇ, ವಾಸ್ತವದಲ್ಲಿ ನಿಮ್ಮ ಮನ ಕನ್ನಡದ ಉಳಿವಿಗಾಗಿ ತುಡಿಯುತ್ತಿರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದ ಬಿ ವಿಜಯ್ ಕುಮಾರ್ ಚಿತ್ರದುರ್ಗದ ಐತಿಹಾಸಿಕ ಹಿನ್ನೆಲೆ ಹಾಗೂ ಕನ್ನಡ ಸಾಹಿತ್ಯದ ಉಳಿವಿಗೆ ಶ್ರಮವಹಿಸಿದ ಡಾ. ಬಿ ಎಲ್ ವೇಣು ಅವರು ನಮ್ಮ ದುರ್ಗದ ಆಸ್ತಿ, ನಮ್ಮ ಶಾಲೆಯ ಮಕ್ಕಳು ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿ, ಮುಂದಿನ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದ್ದಾರೆ ಎಂದರು. ಶಿಕ್ಷಕರ ಪ್ರಯತ್ನ, ಪೋಷಕರ ಸಹಕಾರ, ಮಕ್ಕಳ ಒಳ್ಳೆಯ ಫಲಿತಾಂಶ ಬರುವಲ್ಲಿ ಸಹಾಯವಾಗಲಿದೆ, ಅಲ್ಲದೇ ಕನ್ನಡದ ಉಳಿವಿಗೆ ನಿಮ್ಮ ಪಾತ್ರ ಅಮೂಲ್ಯವಾಗಿ, ನಿರಂತರವಾಗಿ ಕನ್ನಡದ ಬಗ್ಗೆ ಇರುವ ಐತಿಹಾಸಿಕ ಹಿನ್ನೆಲೆಯ ಬಗ್ಗೆ. ಮಾಹಿತಿಯನ್ನು ಸಂಗ್ರಹಿಸಿ ಎಂದರು.
10ನೇ ತರಗತಿಯಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ವಿವರ ಈ ರೀತಿ ಇದೆ.
1)ಅಸ್ಮಾ ಬಾನು ಸಿ ಎ
2) ಸ್ಪಂದನಾ ಟಿ
3) ಪ್ರೇಮಶ್ರೀ.ಜಿ
4) ವರುಣ್.ಕೆ ಪಿ
5) ವರುಣ್ ಕೆ ಪಿ
6) ಸಾಯಿ ಕೃತಿ ಎನ್
7) ತನುಶ್ರೀ ಕೆ ಎಂ
ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ದಿನಾಚರಣೆಯ ಅಂಗವಾಗಿ ಶಿಕ್ಷಕರು ಮಕ್ಕಳಾಗಿ, ಮಕ್ಕಳು ಪ್ರೇಕ್ಷಕರಾಗಿ ನಡೆದ ಕಾರ್ಯಕ್ರಮವನ್ನು ಆನಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶಿಕ್ಷಕ/ಶಿಕ್ಷಕಿಯರು ನೃತ್ಯ, ಗಾಯನ, ಜಾನಪದ ನೃತ್ಯ, ಚಿತ್ರಕಲೆ ಹೀಗೆ ಹಲವಾರು ಮನೋರಂಜನಾತ್ಮಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನಿತಾ ವಿಜಯ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಪೃಥ್ವೀಶ ಎಸ್.ಎಂ , ಶೈಕ್ಷಣಿಕ ಆಡಳಿತಾಧಿಕಾರಿಯಾದ ಡಾ.ಕೆ.ಎನ್ ಸ್ವಾಮಿ , ಶಾಲೆಯ ಮುಖೋಪಾಧ್ಯಾಯರಾದ ಸಂಪತ್ ಕುಮಾರ್ ಸಿ.ಡಿ, ಐ.ಸಿ.ಎಸ್.ಇ ಪ್ರಾಚಾರ್ಯರಾದ ಶ್ರೀ ಬಸವರಾಜಯ್ಯ ಪಿ ಹಾಗೂ ಬೋಧಕ/ಬೋಧಕೇತರ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಸನಿಹ ಸಿಂಚನ ಹಾಗೂ ನವಮಿ ನಿರೂಪಿಸಿದರು. ಕುಮಾರಿ ತೃಷಾ ಪ್ರಾರ್ಥಿಸಿದರು. ಕುಮಾರಿ ಜಾಹ್ನವಿ ಸ್ವಾಗತಿಸಿದರು, ಕುಮಾರಿ ಶ್ರೀಶಾ ರೆಡ್ಡಿ ವಂದಿಸಿದರು.