ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಕಾಂಗ್ರೆಸ್ ಆಪರೇಷನ್ ಹಸ್ತದ ಹಿಂದೆ ಬಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಹೊರಟಿದೆ. ಮೈತ್ರಿ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಮೈತ್ರಿ ಬಗ್ಗೆ ನನಗೆ ಖಂಡಿತ ಒಪ್ಪಿಗೆ ಇದೆ. ಬಿಜೆಪಿಯ ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಈ ಪ್ರಯತ್ನವನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಮಾಡಲ್ಲ ಎಂದುಕೊಳ್ಳುತ್ತೇನೆ. ಜೊತೆಗೆ ಸೀಟು ಹಂಚಿಕೆಯ ವಿಚಾರವಾಗಿ ಇನ್ನು ನಮ್ಮ ಬಳಿ ಏನು ಕೇಳಿಲ್ಲ.
ದೆಹಲಿ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆನಾವೂ ಬದ್ಧರಾಗಿರುತ್ತೇವೆ. ಎಲ್ಲಾಮಾತುಕತೆ ಸಂಪೂರ್ಣವಾದ ಬಳಿಕ ನಾನೇ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಳಿ ಹೋಗಿ ಮಾತುಕತೆ ನಡೆಸುತ್ತೇನೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಈಗಾಗಲೇ ದೇವೇಗೌಡ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಪ್ರಕಾರ ಜೆಡಿಎಸ್ ಗೆ ನಾಲ್ಕು ಸೀಟು ಕೊಡುವುದಕ್ಕೆ ಒಪ್ಪಿದ್ದಾರೆ. ಎಲ್ಲರೂ ಒಟ್ಟಾಗಿ ದೆಹಲಿ ನಾಯಕರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಹೆಚ್ಚಿನ ಸೀಟು ಗೆಲ್ಲಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.