ಕೊರೊನಾ ಮೂರನೆ ಅಲೆ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತೆ ಎಂಬ ತಜ್ಞರ ಮಾತು ಪೋಷಕರನ್ನು ಆತಂಕಕ್ಕೆ ದೂಡಿತ್ತು. ಹಾಗೋ ಹೇಗೋ ಕೊರೊನಾ ಮೂರನೆ ಅಲೆ ಕಳೆಯಿತು. ಮಕ್ಕಳಿಗೆ ಯಾವುದೇ ರೀತಿಯ ದೊಡ್ಡ ಸಮಸ್ಯೆಯಾಗದೆ ಪೋಷಕರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಕೇರಳದಲ್ಲಿ ಟಮೋಟೋ ವೈರಸ್ ಭಯಗೆಡವಿದೆ.
ಟಮೋಟೋ ಜ್ವರ ಮಕ್ಕಳನ್ನೇ ಟಾರ್ಗೆಟ್ ಮಾಡಿದೆ. ಕೇರಳ ಒಂದರಲ್ಲಿಯೇ ಸುಮಾರು 82 ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಪಿಣರಾಯಿ ವಿಜಯನ್ ಸರ್ಕಾರ ಮಕ್ಕಳ ಮೇಲೆ ವಿಶೇಷ ನಿಗಾ ಇಟ್ಟಿದೆ. ಆದರೆ ಜ್ವರಕ್ಕೆ ಕಾರಣವೇನೆಂಬುದು ಇನ್ನು ತಿಳಿದು ಬಂದಿಲ್ಲ.
ಜ್ವರ ಕಾಣಿಸಿಕೊಂಡ ಮಕ್ಕಳ ಮೈಮೇಲೆ ಕೆಂಪು ಕೆಂಪು ಗುಳ್ಳೆಗಳು ಕಾಣಿಸುತ್ತಿವೆ. ತುರಿಕೆಯಿಂದಲೂ ಮಕ್ಕಳು ಬಳಲುತ್ತಿದ್ದಾರೆ. ಈ ಜ್ವರ ವೈರಲ್ ಸೋಂಕು ರೀತಿಯಲ್ಲಿ ಅತಿ ವೇಗದಲ್ಲಿ ಹರಡುತ್ತಿದೆ. ಕೀಲು ಊದಿಕೊಳ್ಳುವುದು, ಬಹು ಬೇಗ ಸುಸ್ತಾಗುವುದು, ಮೈಕೈ ನೋವು, ಮಗುವಿನ ಬಾಯಲ್ಲಿ ಕಿರಿಕಿರಿಯುಂಟಾಗುತ್ತಿರುವುದು ಸಹ ಕಂಡು ಬಂದಿದೆ. ಇದರಿಂದ ಪೋಷಕರು ಗಾಬರಿಯಾಗಿದ್ದಾರೆ. ಅತ್ತ ಸರ್ಕಾರ ಹೆಚ್ಚು ಗಮನ ಹರಿಸಿದ್ದು, ಕಾಯಿಲೆಗೆ ಕಾರಣ ತಿಳಿದುಕೊಳ್ಳುವ ಪ್ರಯತ್ನದಲ್ಲಿದೆ.