ಕಾಂಗ್ರೆಸ್ ಪಕ್ಷದಲ್ಲೂ ಎಲ್ಲವೂ ಸರಿ ಇಲ್ಲ ಎಂಬುದೇನು ಗುಟ್ಟಾಗಿ ಉಳಿದ ವಿಚಾರವಲ್ಲ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ, ಸಿಎಂ ಖುರ್ಚಿಗೆ ಪೈಪೋಟಿಯಂತು ನಡೆಯುತ್ತಲೇ ಇದೆ. ಅದರಲ್ಲೂ ದಲಿತ ಸಮುದಾಯದ ಸಮಾವೇಶವೂ ಸಾಕಷ್ಟು ಸದ್ದು ಮಾಡಿತ್ತು. ಹೈಕಮಾಂಡ್ ಸೂಚನೆ ಮೇರೆಗೆ ಸಮುದಾಯದ ಸಮಾವೇಶವೂ ನಿಂತಿದೆ, ಡಿನ್ನರ್ ಪಾರ್ಟಿಯೂ ಮುಂದೂಡಿಕೆಯಾಗಿದೆ. ಆದರೆ ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ವಿಚಾರವಂತೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವಾಗಲೇ ಸಚಿವ ಸತೀಶ್ ಜಾರಕಿಹೊಳಿ ಜೆಡಿಎಸ್ ನಾಯಕರ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿಯೇ ಸಂಚಲನ ಸೃಷ್ಟಿಸಿದೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ನಿನ್ನೆ ಡಿನ್ನರ್ ಮೀಟಿಂಗ್ ನಡೆದಿದೆ. ಈ ಡಿನ್ನರ್ ಪಾರ್ಟಿಯನ್ನ ಸಚಿವ ಸತೀಶ್ ಜಾರಕಿಹೊಳಿ ಅವರಿಗಾಗಿಯೇ ಏರ್ಪಡಿಸಲಾಗಿತ್ತು ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಡಿನ್ನರ್ ಪಾರ್ಟಿಯಲ್ಲಿ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದು, ರಹಸ್ಯ ಸಭೆ ಕೂಡ ನಡೆದಿದೆ. ಸಂಸತ್ ನ ಹೆಚ್.ಡಿ.ಕುಮಾರಸ್ವಾಮಿ ಕಚೇರಿಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಕೂಡ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಇನ್ನು ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಾಗಿನಿಂದ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಿದೆ. ಹಲವು ವಿಚರಗಳನ್ನಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸೋದು, ಹೋರಾಟ ಮಾಡೋದು ಮಾಡುತ್ತಾ ಇದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರು ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಲಾಖೆಗೆ ಸಂಬಂಧಿಸಿದ ಭೇಟಿ ಅಷ್ಟೇ ಇದು. ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆಯನ್ನೇನೋ ಕೊಟ್ಟಿದ್ದಾರೆ.

