ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಇಂದು ಬೆಳಗ್ಗೆನೆ ಸುದ್ದಿಗೋಷ್ಟಿ ನಡೆಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ನ ಗ್ಯಾರಂಟಿಗಳ ಬಗ್ಗೆ ಹರಿಹಾಯ್ದಿದ್ದರು. ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂದು ಹೇಳಿದ್ದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಗ್ಯಾರಂಟಿ ಯೋಜನೆಗಳು ತಲುಪಿವೆಯೇ ಎಂಬುದನ್ನು ಜನರ ಬಳಿ ಕೇಳಿ ತಿಳಿದುಕೊಳ್ಳಬೇಕು. ಕುಮಾರಸ್ವಾಮಿಗೆ ಏನು ಗೊತ್ತಿದೆ..? ಅವರೇನು ಫಲಾನುಭವಿಯೆ..? ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡುವುದಕ್ಕೆ ಆಗಲಿಲ್ಲ. ಚನ್ನಪಟ್ಟಣ ಮತದಾರರ ಬಳಿ ನಾನೇ ಮಾತನಾಡಿದ್ದೀನಿ. ಅವರ ಬಳಿಯೇ ಕೇಳಿದ್ದರೆ, ಕುಮಾರಸ್ವಾಮಿಗೆ ತಿಳಿಯುತ್ತಾ ಇತ್ತು.
ಗೃಹಲಕ್ಷ್ಮೀ ಯೋಜನೆಯಲ್ಲಿ ಶೇಕಡ 5ರಷ್ಟು ಮಾತ್ರ ತೊಂದರೆಯಾಗಿದೆ. ಪಾಪ ಅವರು ಮಾತನಾಡುತ್ತಿದ್ದಾರೆ ಮಾತನಾಡಲಿ. ಬಡವರ, ಹೆಣ್ಣುಮಕ್ಕಳ ಕಷ್ಟ ಅವರಿಗೆ ಗೊತ್ತಾಗಲ್ಲ. ದಸರಾಗೆ ಬಂದಿದ್ದ ಜನ ನೋಡಿದರೇನೆ ಗೊತ್ತಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ಜನ ಹಬ್ಬ ಆಚರಿಸುತ್ತಿದ್ದಾರೆ. ಕುಮಾರಸ್ವಾಮಿ ಬಹಳ ಅರ್ಜೆಂಟ್ ನಲ್ಲಿ ಇದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಗೂ ಕುಮಾರಸ್ವಾಮಿಗೂ ಏನು ಸಂಬಂಧ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಹೈಕಮಾಂಡ್ ಸಿಎಂ ಸ್ಥಾನ ನೀಡಿದೆ. ಹೈಕಮಾಂಡ್ ಹೇಳಿದ್ದನ್ನು ನಾವೂ ಪಾಲಿಸುತ್ತೇವೆ ಎಂದು ಕುಮಾರಸ್ವಾಮಿ ಅವರ, ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ನೋಟೀಸ್ ಮೇಲೆ ಇಟ್ಟಿದೆ ಎಂಬ ಮಾತಿಗೆ ತಿರುಗೇಟು ನೀಡಿದ್ದಾರೆ.
ಇದೆ ವೇಳೆ ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವ ಬಗ್ಗೆ ಮಾತನಾಡಿ, ವಿಜಯೇಂದ್ರಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದರ ಜೊತೆಗೆ ಕುಮಾರಸ್ವಾಮಿ ಅವರಿಗೂ ಒಳ್ಳೆಯದಾಗಲಿ ಎಂದು ಬಯಸಿದ್ದಾರೆ.