ಬೆಳಗಾವಿ: ಇತ್ತಿಚೆಗೆ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆಯ ಮಾತುಗಳನ್ನು ಆಡಿದ್ದರು. ಈ ದೇಶದ ಮೇಲೆ ಮುಸ್ಲಿಮರಿಗೂ ಹಕ್ಕಿದೆ ಎಂಬ ಮಾತನ್ನು ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ಇದೀಗ ಸವರ್ಣಸೌಧದ ಚಳಿಗಾಲದ ಅಧಿವೇಶನದಲ್ಲೂ ಇದೇ ವಿಚಾರ ಚರ್ಚೆಗೆ ಬಂದಿದೆ. ಬಿಜೆಪಿ ನಾಯಕರು ಸಭಾತ್ಯಾಗ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಪರವಾಗಿ ನೀಡಿದ ಹೇಳಿಕೆಯನ್ನು ಹಿಂಪಡೆಯಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದರು. ಬಿಜೆಪಿ ನಾಯಕರೆಲ್ಲಾ ಇಂದು ಸಭಾತ್ಯಾಗ ಮಾಡಿದರು. ಆದರೆ ಎಸ್ ಟಿ ಸೋಮಶೇಖರ್ ಮಾತ್ರ ಕುಳಿತಲ್ಲಿಯೇ ಕುಳಿತಿದ್ದರು. ಈ ಮೂಲಕ ಕಾಂಗ್ರೆಸ್ ಸೇರುವ ಸೂಚನೆಯನ್ನು ತೋರಿಸುತ್ತಿದ್ದಾರಾ ಎಂಬ ಚರ್ಚೆಗಳು ಶುರುವಾಗಿವೆ.
ಯಾಕಂದ್ರೆ ಎಸ್ ಟಿ ಸೋಮಶೇಖರ್ ಕಳೆದ ಕೆಲ ದಿನಗಳ ಹಿಂದಿನಿಂದ ಬಿಜೆಪಿ ಜೊತೆಗೆ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಎಸ್ ಟಿ ಸೋಮಶೇಖರ್ ಸಂಪರ್ಕದಲ್ಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ರೀತಿಯ ಚರ್ಚೆಗಳ ನಡುವೆ ಎಸ್ ಟಿ ಸೋಮಶೇಖರ್ ಸದನದಲ್ಲಿಯೇ ಕುಳಿತು ಆಶ್ಚರ್ಯ ಮೂಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವಿರೋಧಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇನ್ನು ಹಲವು ಸದಸ್ಯರು ಎಲ್ಲರೂ ಬನ್ನಿ ಹೊರಗೆ ಹೋಗೋಣಾ ಎಂದು ಕರೆದಿದ್ದಾರೆ. ಆದರೆ ಈ ವೇಳೆ ಎಸ್ ಟಿ ಸೋಮಶೇಖರ್ ಕುಳಿತಿದ್ದ ಜಾಗ ಬಿಟ್ಟು, ಎದ್ದೇಳಲಿಲ್ಲ. ಆದರೆ ಇದರ ನಡವೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರ ಅನುಪಸ್ಥಿತಿಯಲ್ಲಿ ಉಳಿದ ಸಚಿವರು ಉತ್ತರ ನೀಡಿದ್ದಾರೆ.