ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಕದನ ತಾರಕಕ್ಕೇರಿದೆ. ಈಗಾಗಲೇ ಸಿಎಂ ಸ್ಥಾನದಲ್ಲಿ ದಾಖಲೆ ಬರೆದಿರುವಂತ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿರುವಂತ ಸಂದರ್ಭದಲ್ಲಿ ಅತ್ತ ಡಿಕೆ ಶಿವಕುಮಾರ್ ದೆಹಲಿಯಲ್ಲಿ ವಾಸ್ತವ್ಯ ಹೂಡಿ ಸಿಎಂ ಕುರ್ಚಿಗೆ ಕಸರತ್ತು ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಮಹತ್ವವಾದಂತ ಬೆಳವಣಿಗೆಯೊಂದು ನಡೆದಿದೆ. ಅದುವೆ ಕಾಂಗ್ರೆಸ್ ಕೆಲ ನಾಯಕರು ಫಾರಿನ್ ಟ್ರಿಪ್ ಹೊರಟಿದ್ದಾರೆ.
25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸಕ್ಕೆ ಹೊರಟಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಅದರಲ್ಲೂ ಸ್ಚಂತ ಖರ್ಚಿನಲ್ಲಿ ಈ ಟೂರ್ ಆಯೋಜನೆ ಮಾಡಿಕೊಂಡಿದ್ದಾರೆ. ಫೆಬ್ರವರಿ 16 ರಂದು ಹೊರಟಿರುವ ಟೀಂ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕಡೆಗೆ ಹೊರಟಿದ್ದಾರೆ. ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಬಿಎಂ ನಾಗರಾಜ್, ಯಶವಂತರಾಯ್ ಗೌಡ ಪಾಟೀಲ್, ಅನಿಲ್ ಚಿಕ್ಕಮಾದು, ಜಿಟಿ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಬಸವನಗೌಡ ದದ್ದಲ್, ಎ ಆರ್ ಕೃಷ್ಣಮೂರ್ತಿ, ಬಸನಗೌಡ ತುರುವಿನಾಳ್ ಸೇರಿದಂತೆ ಹಲವು ಶಾಸಕರು ಫಾರಿನ್ ಟ್ರಿಪ್ ಗೆ ಹೊರಟಿದ್ದಾರೆ.
ಈ ಬಗ್ಗೆ ಎಂಎಲ್ಎ ಪುಟ್ಟರಂಗ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಪಶುಸಂಗೋಪನಾ ಇಲಾಖೆಯಿಂದ ಹೋಗ್ತಾ ಇದ್ದೀವಿ. ಪಶುಸಂಗೋಪನಾ ಮಾಹಿತಿ ಪಡೆಯಲು ಹೋಗ್ತಿದ್ದೀವಿ. ಹಲವರು ಫ್ಯಾಮಿಲಿ ಜೊತೆಗೆ ಬರ್ತಿದ್ದಾರೆ, ನಾವೆಲ್ಲಾ ಸಿಂಗಲ್ ಆಗಿ ಹೋಗ್ತಿದ್ದೀವಿ. ಸರ್ಕಾರದಿಂದಾನೇ ಹೋಗ್ತಾ ಇದ್ದೀವಿ. ಬಜೆಟ್ ಒಳಗೆ ಬರ್ತೀವಿ. ಸಿಎಂ ಅವರಿಗೆ ಗೊತ್ತಿದೆಯೋ ಇಲ್ವಾ ಗೊತ್ತಿಲ್ಲ. ನಮ್ಮ ಇಲಾಖೆ ಅವರು ಹೇಳಿರಬಹುದು. ನಮ್ಮ ಸಚಿವರು ಹೇಳಿದ್ದಾರೆ. ಹೀಗಾಗಿ ನಾವೆಲ್ಲಾ ಹೋಗ್ತಾ ಇದ್ದೀವಿ ಎಂಬ ಮಾಹಿತಿಯನ್ನ ನೀಡಿದ್ದಾರೆ ಪುಟ್ಟರಂಗ ಶೆಟ್ಟಿ ಅವರು.


