ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೇರಿ ಒಂದು ಸಾವಿರ ದಿನಗಳಾಗಿದೆ ಎಂದು ಹಾವೇರಿಯಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಉಪ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಎಂಬುದೇ ಗೊತ್ತಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿ.ಎಂ.ಗದ್ದುಗೆಯೇರಲು ದೆಹಲಿಗೆ ಹೋಗಿ ಬರುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ದಿನಗಳಾಗಿರುವುದನ್ನು ಕರಾಳ ದಿನವೆಂದು ಆಚರಿಸುವುದು ಸೂಕ್ತ ಎಂದರು.
ಬಡವರ ರೇಷನ್ ಕಾರ್ಡ್‍ಗಳನ್ನು ಸರ್ಕಾರ ರದ್ದುಪಡಿಸುತ್ತಿದೆ. ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆರು ಸಾವಿರ ಕೋಟಿ ರೂ.ಅಬಕಾರಿ ಡೀಲ್ ನಡೆದಿದೆ.
ರೈತರು, ಅಧಿಕಾರಿಗಳ ಸರಣಿ ಆತ್ಮಹತ್ಯೆಗಳಾಗುತ್ತಿದ್ದರೂ ಇದ್ಯಾವುದರ ಪರಿವೆಯಿಲ್ಲದೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಔಷಧಿಗಳು ಸಿಗುತ್ತಿಲ್ಲ. ಸರ್ಕಾರಕ್ಕೆ ಏನು ಕಚ್ಚಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಡಿ.ಕೆ.ಶಿ. ಮತ್ತು ಡಿ.ಕೆ.ಸುರೇಶ್ ಸಹೋದರರು ಅಧಿಕಾರಕ್ಕಾಗಿ ಬೀದಿಗಿಳಿದಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಹೊರಟಿದೆ. ಈಗಾಗಲೆ ಬಸ್‍ಗಳ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳನ್ನು ಟಿಪ್ಪರ್‍ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದನ್ನು ನೋಡಿದರೆ ಸರ್ಕಾರ ಪಾಪರ್ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಟೀಕಿಸಿದರು.
ಭೈರತಿ ಬಸವರಾಜ್ ಶರಣಾಗಿದ್ದಾರೆ. ಇದು ರಾಜಕೀಯ ಷಡ್ಯಂತ್ರ. ಕೇಂದ್ರದ ಯೋಜನೆಗಳಿಂದ ರೈತರಿಗೆ ಒಳ್ಳೆಯದಾಗುತ್ತಿದೆ. ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್‍ನವರು ವಿನಾ ಕಾರಣ ವಿರೋಧಿಸುತ್ತಿರುವುದರಲ್ಲಿ ಅರ್ಥವಿಲ್ಲ. ರಸಗೊಬ್ಬರ ಬ್ಲಾಕ್‍ನಲ್ಲಿ ಮಾರಾಟವಾಗುತ್ತಿದೆ. ರಾಜ್ಯ ಸರ್ಕಾರ ಚರ್ಚಿಸಲು ಸಭೆ ಕರೆದರೆ ನಾವುಗಳು ಭಾಗವಹಿಸುತ್ತೇವೆಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಬಿಜೆಪಿ.ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಕೆಲವರು ಈ ಸಂದರ್ಭದಲ್ಲಿ ಹಾಜರಿದ್ದರು.


