ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 9448338821
ಸುದ್ದಿಒನ್
ಚಿತ್ರದುರ್ಗ ಜಿಲ್ಲೆ ಸುರಕ್ಷಿತವಾದ ಭೌಗೋಳಿಕ ಪ್ರದೇಶವಾಗಿದೆ. ಭೂಕಂಪ, ಸುನಾಮಿ, ಚಂಡ ಮಾರುತ ಹಾಗೂ ನೆರೆಹಾವಳಿಯಂತಹ ಪ್ರಕೃತಿ ವಿಕೋಪಗಳಿಂದ ಮುಕ್ತವಾಗಿದೆ. ಭೂ ಮೇಲ್ಭಾಗದ ಶಿಲೆಗಳಿಂದ ಹಿಡಿದು ಭೂಚಿಪ್ಪಿನ ಕೆಳಭಾಗದ ಶಿಲೆಗಳು ಬಹಳ ಗಟ್ಟಿಯಾದ ಅಗ್ನಿ ಶಿಲೆಗಳು, ಪದರ ಶಿಲೆಗಳು ಮತ್ತು ರೂಪಾಂತರ ಶಿಲೆಗಳನ್ನು ಹೊಂದಿದೆ. ಈ ಶಿಲೆಗಳು ಸುಮಾರು 2500 ರಿಂದ 2400 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ ಎಂದು ಭೂವೈಜ್ಞಾನಿಕವಾಗಿ ಕಂಡುಹಿಡಿಯಲಾಗಿದೆ.
ಈ ಶಿಲೆಗಳನ್ನು ಆರ್.ಕೆ.ಎನ್.(Archaean) ಯುಗದ ಶಿಲೆಗಳೆಂದು (ಬಹಳ ಹಳೆಯ) ಹೆಸರಿಸಲಾಗಿದೆ. ಭೂಮಿಯ ಉಗಮವಾದ ಕೆಲವು ಮಿಲಿಯನ್ ವರ್ಷಗಳ ನಂತರ ಭೂಮಿಯ ಅಂತರಾಳದ ಶಿಲಾಪಾಕ (ಹೆಚ್ಚು ಉಷ್ಣತೆ ಮತ್ತು ಒತ್ತಡ)ವು ದುರ್ಬಲ ಕವಚದಿಂದ ಹೊರಚಿಮ್ಮಿ ಭೂಚಿಪ್ಪಾಗಿದೆ. ಅದನ್ನು ಮೊದಲ ಅಗ್ನಿಶಿಲೆ ಎಂದು ಹೇಳಲಾಗಿದೆ. ಈ ಶಿಲೆಯಲ್ಲಿ ಯಾವ ವಿಧವಾದ ಪಳೆಯುಳಿಕೆಗಳು ((Fossils)) ಇರುವುದಿಲ್ಲ. ಆ ಸಂದರ್ಭದಲ್ಲಿ ಗಿಡಮರಗಳಾಗಲೀ ಅಥವಾ ಪ್ರಾಣಿಗಳಾಗಲೀ, ಮಾನವನಾಗಲೀ ಜನ್ಮ ತಾಳಿರಲಿಲ್ಲ ಎಂದು ದೃಢಪಟ್ಟಿದೆ. ಭೂಚಿಪ್ಪಿನ ಮೇಲೆ ನಂತರ ಅನೇಕ ಬಾರಿ ಶಿಲಾಪಾಕವು ಭೂಚಿಪ್ಪನ್ನು ಛೇದಿಸಿಕೊಂಡು ಬಂದು ಈಗಿನ ಭೂಮೇಲ್ಭಾಗದ ಪ್ರಕೃತಿ ಹೊಂದಿದೆ. ಭೂಮಿಯ ಆಳದ ಶಿಲೆಗಳು ಬಹಳ ಗಟ್ಟಿಯಾಗಿರುವುದರಿಂದ ಭಾರತದ ಯಾವ ಭಾಗದಲ್ಲಾಗಲೀ ಭೂಕಂಪಗಳು ಸಂಭವಿಸಿದರೆ ಅದರ ಕೊನೆಯ ಕಂಪನವು (ದುರ್ಬಲ) ನಮ್ಮ ಭೂಪ್ರದೇಶವನ್ನು ತಲುಪುವುದರಿಂದ ಅದರ ತೀವ್ರತೆಯು ಕಡಿಮೆ ಇರುವುದರಿಂದ ಅದರ ಅನುಭವವಾಗುವುದಿಲ್ಲ. ಹಾಗೂ ಹೆಚ್ಚಿನ ಅನಾಹುತಗಳ ಸಂಭವ ಕಡಿಮೆ.
ಭೂಚಿಪ್ಪಿನ ಶಿಲೆಯು 45 ಕಿ.ಮೀ. ಆಳದವರೆಗೆ ಆವೃತ್ತವಾಗಿದೆ ಎಂದು ಭೂ ವೈಜ್ಞಾನಿಕವಾಗಿ ಸಂಶೋಧನೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತ ಯಾವ ಸಮುದ್ರಗಳು ಇಲ್ಲದ ಪ್ರಯುಕ್ತ ಚಂಡಮಾರುತದಿಂದ ಹಾಗೂ ಸುನಾಮಿ ಅಲೆಗಳಿಂದ ಮುಕ್ತವಾಗಿದೆ. ಪ್ರಕೃತಿಯು ಹೆಚ್ಚಿನ ಖನಿಜ ಸಂಪತ್ತು ಕೂಡ ಕೊಟ್ಟಿದೆ.






