ಸಿಹಿನೀರಿನ ಮಲಿನತೆ ಕಾರಣವೇನು ? ಜೆ. ಪರಶುರಾಮ ಅವರ ವಿಶೇಷ ಲೇಖನ…!

suddionenews
2 Min Read

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಆಕಾಶದಿಂದ ಬಿದ್ದ ಮಳೆನೀರು ಶುದ್ಧವಾಗಿಯೇ ಇರುತ್ತದೆ. ಬಿದ್ದ ಮಳೆ ನೀರು ಭೂಮಿಯ ಮೇಲಿರುವ ಕಲುಷಿತ ವಸ್ತುಗಳೊಡನೆ ಬೆರೆತು ಅಲ್ಲಿರುವ ಎಲ್ಲ ಕಲ್ಮಷಗಳನ್ನು ತನ್ನೊಳಗೆ ಅರಗಿಸಿಕೊಂಡು ಮಲಿನಗೊಳ್ಳುತ್ತದೆ. ಸಾಗುವಳಿ ಜಮೀನಿನಲ್ಲಿ ಕಂಡುಬರುವ ಗೊಬ್ಬರ, ಕೀಟನಾಶಕಗಳ ರಾಸಾಯನಿಕ ವಸ್ತುಗಳು, ಲವಣ, ಕಬ್ಬಿಣ, ಮುಂತಾದ ಲೋಹಗಳನ್ನು ಹೊತ್ತುಹರಿಯುತ್ತದೆ. ಇಂತಹ ಮಲಿನವಾದ ನೀರು ಕೆರೆಕಟ್ಟೆಗಳಲ್ಲಿ ನದಿಗಳಲ್ಲಿ ಶೇಖರವಾಗಿ ಕುಡಿಯಲು ಅನುಪಯುಕ್ತವಾಗುತ್ತದೆ. ಇದಕ್ಕೆ ಮಾನವ ನಿರ್ಮಿತ ಕಾರಣಗಳು ಸೇರಿಕೊಂಡಾಗ ನೀರು ವಿಷವಾಗುತ್ತದೆ. ಪಟ್ಟಣಗಳಲ್ಲಿ ಶೇಖರವಾದ ಕಸ, ಕೊಳಚೆ ಪದಾರ್ಥಗಳನ್ನು ನೀರಿಗೆ ಹಾಕುವುದು. ಕೈಗಾರಿಕಾ ತ್ಯಾಜ್ಯ ವಸ್ತುಗಳನ್ನು ನೇರವಾಗಿ ನದಿಗೆ ಬಿಡುವುದು ನೀರಿನ ಮಲಿನತೆಗೆ ಕಾರಣವಾಗಿದೆ.

ನಮ್ಮ ದೇಶದಲ್ಲಿ ನದಿಯ ದಂಡೆಯಲ್ಲಿರುವ ಯಾವುದೇ ನಗರ, ಪಟ್ಟಣಕ್ಕೆ ಹೋದರೂ ಜಲಮಾಲಿನ್ಯದ ಅರಿವು ನಿಮಗಾಗುತ್ತದೆ. ಅಲ್ಲಿ ಉತ್ಪತ್ತಿಯಾಗುವ ಎಲ್ಲಾ ಹೊಲಸು ಕೊಳೆತ ತರಕಾರಿ, ಹಣ್ಣು ಸಿಪ್ಪೆ, ಕಾಗದ, ಪ್ಲಾಸ್ಟಿಕ್ ಪದಾರ್ಥಗಳನ್ನು ನದಿಗೆ ಹಾಕಿದಾಗ ನೀರು ಕಲುಷಿತವಾಗುತ್ತದೆ. ನೀರಿಗೆ ಸೇರುವ ಈ ಸಾವಯವ ಪದಾರ್ಥಗಳನ್ನು ವಿಘಟಿಸಿ ಜೀರ್ಣಿಸಿಕೊಳ್ಳಲು ಸೂಕ್ಷ್ಮ ಜೀವಿಗಳು ನೀರಿನಲ್ಲಿರುವ ಆಮ್ಲಜನಕವನ್ನು ಬಳಸಿಕೊಳ್ಳುತ್ತದೆ. ಆಮ್ಲಜನಕ ಕಡಿಮೆಯಾದಾಗ ಈ ಸೂಕ್ಷ್ಮಜೀವಿಗಳು ಸಯುತ್ತವೆ. ಜಲಜನಕ ವ್ಯರ್ಥವಸ್ತುಗಳಿಂದ ಬರುವ ಗಂಧಕದೊಡನೆ ಸೇರಿ ದುರ್ನಾತ ಬೀರುವ ಜಲಜನಕದ ಸಲ್ಪೇಡ್ ಅನಿಲವನ್ನು ಉತ್ಪತ್ತಿ ಮಾಡುತ್ತದೆ. ನೀರು ಬಗ್ಗಡವಾಗುತ್ತದೆ. ಸೂರ್ಯ ರಶ್ಮಿ ನೀರಿನೊಳಕ್ಕೆ ಪ್ರವೇಶಿಸದೇ ಇದ್ದಾಗ ನೀರಿನಲ್ಲಿರುವ ಶೈವಲ ಮೀನುಗಳು ಸಾಯುತ್ತವೆ.

ನಮ್ಮ ದೇಶದಲ್ಲಿ ವ್ಯಾಪಕವಾದ ನದಿಜಾಲವಿದೆ. ಬಹುತೇಕ ನದಿಗಳ ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪುರಾತನರು ಉತ್ತರಭಾರತದಲ್ಲಿ ಗಂಗಾನದಿ ಹಾಗೂ ದಕ್ಷಿಣದಲ್ಲಿ ತುಂಗಾನದಿಗಳನ್ನು ಪವಿತ್ರವೆಂದು ಭಾವಿಸಿ “ಗಂಗಾಸ್ಥಾನ, ತುಂಗಾಪಾನ” ಎಂದು ನಾಣ್ಮುಡಿ ರೂಢಿಸಿದ್ದರು. ಇಂದು ಗಂಗಾನದಿಯ ಪರಿಸ್ಥಿತಿ ನೋಡಿ ಪಟ್ನಾ ನಗರದ ಕೊಳಕೆಲ್ಲವೂ ಯಾವುದೇ ಶುದ್ಧಕರಣಕ್ಕೆ ಒಳಗಾಗದೇ ಗಂಗಾನದಿಯನ್ನು ಸೇರುತ್ತದೆ. ಪುಣ್ಯಕ್ಷೇತ್ರವಾದ ಕಾಶಿಯಲ್ಲಿ ಏಳು ಕಿ.ಮೀ. ದೂರದವರೆಗೆ ಪ್ರತಿವರ್ಷ ಕೋಟ್ಯಾಂತರ ಜನರು ಗಂಗಾಸ್ನಾನ ಮಾಡುತ್ತಾರೆ. ಅಲ್ಲದೇ ಸಾವಿರಾರು ಸುಟ್ಟ ಹೆಣಗಳನ್ನು ನದಿಗೆ ಎಸೆಯಲಾಗುತ್ತದೆ. ಇದೇ ರೀತಿ ರಾಜಧಾನಿ ದೆಹಲಿಯಲ್ಲಿ ಶೇಖರವಾಗುವ ತ್ಯಾಜ್ಯವಸ್ತುಗಳನ್ನು ಯಮುನ ನದಿಗೆ ಹಾಕಲಾಗುತ್ತದೆ.

ನಮ್ಮ ರಾಜ್ಯ ಏಳು ಮುಖ್ಯವಾದ ನದಿಗಳಿಂದ ಕೂಡಿದ್ದು, ಹಲವು ಉಪನದಿಗಳನ್ನೊಳಗೊಂಡಿದೆ. ಮಲೆನಾಡಿನ ಸಂಸ್ಕøತಿ ಭಾಗವಾಗಿರುವ ತುಂಗೆ ಕುದುರೆಮುಖ ಅಭಯಾರಣ್ಯದಲ್ಲಿ ಹುಟ್ಟಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಹರಿಯುತ್ತದೆ. ಇದು ದಾರಿಯುದ್ದಕ್ಕೂ ಜನರ ನಿರ್ಲಕ್ಷ್ಯತೆ, ಬೇಜವಾಬ್ದಾರಿತನಕ್ಕೆ ಒಳಗಾಗಿದೆ. ಈ ನಗರಗಳಲ್ಲಿ ಶೇಖರವಾಗುವ ತ್ಯಾಜ್ಯವಸ್ತು, ಕಸ, ಕಡ್ಡಿ ಮುಂತಾದ ಕೊಳಚೆಯನ್ನು ನದಿಗೆ ಹಾಕಲಾಗುತ್ತದೆ. ನಮ್ಮ ಜನರು ಈ ನೀರನ್ನು ಮಲಿನಗೊಳಿಸಿ ಬಳಸುತ್ತಾರೆ. ನದಿ ಸಿಹಿನೀರನ್ನು ಮಲಿನಗೊಳಿಸದಂತೆ ಕಾಪಾಡುವುದು ನಮ್ಮೆಲ್ಲರ ಹೊಣೆ.

Share This Article