24 ಗಂಟೆಗಳ ಕಾಲ ಗುರುತ್ವವಿಲ್ಲದ ಕೋಣೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ರಕ್ತಪರಿಚಲನೆ, ಸಮತೋಲನ ಮತ್ತು ಮೆದುಳಿನ ಕಾರ್ಯದಲ್ಲಿ ಗಣನೀಯ ಬದಲಾವಣೆ ಆಗುತ್ತದೆ. ಆರೋಗ್ಯವಂತ ವ್ಯಕ್ತಿ 24 ಗಂಟೆಗಳ ಕಾಲ ಶೂನ್ಯ ಗುರುತ್ವದಲ್ಲಿ ಇದ್ದರೆ ಕೆಲವೇ ನಿಮಿಷಗಳಲ್ಲಿ ದೇಹ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತದೆ ಎನ್ನುತ್ತಾರೆ ಗುರುಗ್ರಾಮ್ನ ಪಾರಸ್ ಹೆಲ್ತ್ನ ಇಂಟರ್ನಲ್ ಮೆಡಿಸಿನ್ ಮುಖ್ಯಸ್ಥರಾದ ಡಾ ಆರ್ ಆರ್ ದತ್ತಾ.
ಗುರುತ್ವವಿಲ್ಲದೆ ಇದ್ದಾಗ ಹೃದಯವು ರಕ್ತವನ್ನು ಮೇಲಕ್ಕೆ ಪಂಪ್ ಮಾಡಲು ಹೆಚ್ಚು ಶ್ರಮಪಡುವ ಅಗತ್ಯವಿರುವುದಿಲ್ಲ. ತೂಕವಿಲ್ಲದ ಸ್ಥಿತಿಯಲ್ಲಿ ಸುಗಮವಾಗಿ ಹೃದಯದಿಂದ ರಕ್ತವು ಮೆದುಳಿಗೆ ಮತ್ತು ದೇಹಕ್ಕೆ ಪಂಪ್ ಆಗುತ್ತದೆ. ಆರಂಭದಲ್ಲಿ ರಕ್ತದೊತ್ತಡದಲ್ಲಿ ಸೌಮ್ಯ ಏರಿಳಿತಗಳು ಇರಬಹುದು, ಆದರೆ ಪ್ಲಾಸ್ಮಾ ಪ್ರಮಾಣ ಕಡಿಮೆಯಾದಂತೆ ರಕ್ತದೊತ್ತಡ ಕಡಿಮೆಯಾಗಬಹುದು. 24 ಗಂಟೆಗಳಲ್ಲಿ ಈ ಹೃದಯ ಸಂಬಂಧಿ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳು ಈ ಬದಲಾವಣೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ
ಆರೋಗ್ಯಕರ ವ್ಯಕ್ತಿಗೆ ಶೂನ್ಯ ಗುರುತ್ವದಲ್ಲಿ ಒಂದು ದಿನ ಕಳೆಯುವುದು ಅಹಿತಕರವೆನಿಸಬಹುದು ಆದರೆ ಹಾನಿಕರವಲ್ಲ. ಮುಖ ಊದಿಕೊಳ್ಳಬಹುದು, ವಾಕರಿಕೆ, ತಲೆತಿರುಗುವಿಕೆ ಮತ್ತು ತಾತ್ಕಾಲಿಕ ಸಮನ್ವಯದ ಬದಲಾವಣೆಯನ್ನು ಎದುರಿಸಬಹುದು. ಆದರೆ, ಶಾಶ್ವತವಾದ ಸ್ನಾಯು ಅಥವಾ ಮೂಳೆ ಹಾನಿಯಾಗುವುದಿಲ್ಲ. ಗುರುತ್ವಾಕರ್ಷಣೆ ಇಲ್ಲದೆ ಇದ್ದಾಗಲೂ ಮಾನವ ದೇಹ ಬೇಗನೇ ಹೊಂದಿಕೊಳ್ಳುತ್ತದೆ.





