ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಕುಮಾರಸ್ವಾಮಿ ಗೆದ್ದು ಬೀಗಿದರೆ ಈ ಬಾರಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಬಿಜೆಪಿ ಹೈಕಮಾಂಡ್ ನಿಂದ ಕೂಡ ಅದಾಗಲೇ ಬುಲಾವ್ ಬಂದಿತ್ತು. ಹಾಗಾದ್ರೆ ನಿಜವಾಗಲೂ ಕೇಂದ್ರ ಸಚಿವರಾಗುತ್ತಾರಾ ಎಂಬ ವಿಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಹೆಚ್.ಡಿ.ದೇವೇಗೌಡ ಅವರು ಹಾಗೂ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಾಗ ಯಾವುದೇ ಷರತ್ತನ್ನು ಅವರ ಮುಂದೆ ಇಟ್ಟಿರಲಿಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ. ಇಡೀ ವಿಶ್ವವೇ ಭಾರತದ ಅಭಿವೃದ್ಧಿಯತ್ತ ನೋಡುವಂತೆ ಮಾಡಿರುವ ಅಭಿವೃದ್ಧಿಯ ಹರಿಕಾರ ಮೋದಿ ಅವರು ಅವರ ಸಾಧನೆಗಳ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಬೆಳೆಸಿದ್ದು, ಬೇಷರತ್ತಾಗಿ ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾಗಿ ಸೇರಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ತಂದೆಯ ಕೇಂದ್ರ ಸಚಿವ ಸ್ಥಾನದ ಬಗ್ಗೆಯೂ ಮಾತನಾಡಿ, ಕೇಂದ್ರದ ನಾಯಕರು ಕುಮಾರಸ್ವಾಮಿ ಅವರುಗೆ ಯಾವುದಾದರೂ ಸ್ಥಾನಮಾನ ಕೊಟ್ಟರೆ ಸಂತೋಷದಿಂದ ಸ್ವೀಕರಿಸುತ್ತೇವೆ. ಕೊಡದೇ ಹೋದರೂ ಯಾವುದರೆ ಬಗೆಯ ಅಸಮಾಧಾನ ತಳೆಯುವುದಿಲ್ಲ ಎಂದಿದ್ದಾರೆ.
ಇನ್ನು ನಿಖಿಲ್ ಕುಮಾರಸ್ವಾಮಿ ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ, ಫುಲ್ ಟೈಮ್ ರಾಜಕಾರಣ ಮಾಡುತ್ತೀನಿ ಎಂದಿದ್ದಾರೆ. ಜೆಡಿಎಸ್ ಉತ್ತರಾಧಿಕಾರಿಯಾಗಿದ್ದ ಪ್ರಜ್ವಲ್ ರೇವಣ್ಣ ಸದ್ಯ ಎಸ್ಐಟಿ ವಶದಲ್ಲಿದ್ದಾರೆ. ಆ ಸ್ಥಾನಕ್ಕೆ ಅಧಿಕೃತವಾಗಿ ನಿಖಿಲ್ ಕುಮಾರಸ್ವಾಮಿ ಬರಬಹುದು ಎನ್ನಲಾಗುತ್ತಿದೆ.