ಮೈಸೂರು: ದಸರಾ ಹಬ್ಬದ ಆಫರ್ ಖುಷಿಯನ್ನ ಕೇಂದ್ರ ಸರ್ಕಾರವೇನೋ ತಮ್ಮ ನೌಕರರಿಗೆ ನೀಡಿತು. ಶೇಕಡ 3 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತು. ಆದ್ರೆ ರಾಜ್ಯ ಸರ್ಕಾರಿ ನೌಕರರು ಕೂಡ ತಮ್ಮ ತುಟ್ಟಿಭತ್ಯೆಗಾಗಿ ಕಾಯುತ್ತಾ ಕೂತಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೂ ದಸರಾ ಬೋನಸ್ ಥರದ ಗಿಫ್ಟ್ ಸಿಗುತ್ತಾ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಏನಂದ್ರು..? ಇಲ್ಲಿದೆ ನೋಡಿ ಮಾಹಿತಿ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಸರ್ಕಾರಿ ನೌಕರರ ತುಟ್ಟಿಭತ್ಯೆ ಬಾಕಿಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ತುಟ್ಟಿಭತ್ಯೆ ನೀಡಿದ ನಂತರ ರಾಜ್ಯ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ನೀಡುತ್ತದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದರು.
ಇದೆ ವೇಳೆ, ದಸರಾ ವೇಳೆಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆಯನ್ನು ಮಾಡುವುದಿಲ್ಲ ಎಂದು ವಿಪಕ್ಷ ನಾಯಕರು ನುಡಿದಿದ್ದ ಭವಿಷ್ಯದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ವುರೋಧ ಪಕ್ಷದವರು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೆ ಮಾತನಾಡುವ ಅರಿವು ಇಲ್ಲದೆ ಮಾತನಾಡುವ ವಿಪಕ್ಷಗಳ ಭವಿಷ್ಯ ಎಂದಿಗೂ ನಿಜವಾಗುವುದಿಲ್ಲ. ಆದರೆ ಪಕ್ಷದ ವರಿಷ್ಠರ ಆದೇಶದಂತೆ ಎಲ್ಲರೂ ನಡೆಯಬೇಕಿದೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು, ಬಜೆಟ್ ಮಂಡಿಸಲು ಸಾಧ್ಯವಿಲ್ಲ ಎಂದೇ ಹೇಳಿದ್ದರು. ಆದರೂ ನಾನೇ ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿ ಮುಂದುವರೆದು ಬಜೆಟ್ ಮಂಡನೆ ಮಾಡಿದ್ದೇನೆ ಎಂದು ವಿಪಕ್ಷ ನಾಯಕರ ಮಾತಿಗೆ ತಿರುಗೇಟು ನೀಡಿದ್ದಾರೆ.
