ಚಿಕ್ಕಬಳ್ಳಾಪುರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ಬಿಜೆಪಿ ನಾಯಕರೇ ತಲೆ ಕೆಳಗಾಗಿದ್ದಾರೆ. ಹೀನಾಯವಾಗಿ ಸೋಲನ್ನು ಕಂಡಿದ್ದಾರೆ. ಅದರಲ್ಲೂ ಕೆ ಸುಧಾಕರ್ ಸೋತಿದ್ದು ಎಲ್ಲರಿಗೂ ಅತ್ಯಾಶ್ಚರ್ಯವಾಗಿದೆ. ಪ್ರದೀಪ್ ಈಶ್ವರ್, ಸುಧಾಕರ್ ಎದುರು ಗೆಲುವು ಕಂಡಿದ್ದಾರೆ. ಸೋಲಿನ ಬಳಿಕ ಚಿಕ್ಕಬಳ್ಳಾಪುರದ ಜನತೆಗೆ ಸುಧಾಕರ್ ಪತ್ರ ಬರೆದಿದ್ದಾರೆ.
“ಕಳೆದ 10 ವರ್ಷಗಳಿಂದ ಚಿಕ್ಕಬಳ್ಳಾಪುರದ ಜನಪ್ರತಿನಿಧಿಯಾಗಿ, ನಿಮ್ಮೆಲ್ಲರ ಮಗನಾಗಿ, ಸಹೋದರನಾಗಿ ನಿಮ್ಮೆಲ್ಲರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಚಿಕ್ಕಬಳ್ಳಾಪುರದ ಅಭಿವೃದ್ಧಿಗಾಗಿ ನಾನು ಪಟ್ಟ ಶ್ರಮದ ಬಗ್ಗೆ, ನನ್ನ ಬದ್ಧತೆ, ಕೆಲಸದ ಬಗ್ಗೆ ನನಗೆ ಸಂಪೂರ್ಣ ತೃಪ್ತಿಯಿದೆ. ಆದರೂ ಎಲ್ಲೋ ಒಂದು ಕಡೆ ನಿಮ್ಮ ನಿರೀಕ್ಷೆಯನ್ನು ತಲುಪಲು ನನ್ನಿಂದ ಸಾಧ್ಯವಾಗಿಲ್ಲ ಎನಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ನಿಮ್ಮ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ.
ಕೋವಿಡ್ ಕಾಲದಿಂದ ಆರಂಭವಾಗಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಸಚಿವನಾಗಿ ಜವಬ್ದಾರಿವಹಿಸಿಕೊಂಡ ನಂತರ 3-4 ವರ್ಷ ನನ್ನ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಇನ್ನು ಸ್ವಲ್ಪ ಸಮಯ ಹೆಂಡತಿ, ಮಕ್ಕಳಿಗೆ ಸಮಯ ನೀಡಿ, ಬಳಿಕ ಎಂದಿನಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಸೇವೆಗೆ ಮರಳುತ್ತೇನೆ. ಈ ಬಾರಿ ನೀವೂ ಆಯ್ಕೆ ಮಾಡಿದ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ. ಚಿಕ್ಕಬಳ್ಳಾಪುರದ ಅಭಿವೃದ್ಧಿಯನ್ನು ಹಳಿ ತಪ್ಪಿಸದೆ ಇನ್ನಷ್ಟು ಮುಂದೆ ಕೊಂಡೊಯ್ಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.