ತುಮಕೂರು: ಇತ್ತಿಚೆಗೆ ವಿ ಸೋಮಣ್ಣ ಅವರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಈ ಹಿನ್ನೆಲೆ ಬಿಜೆಪಿಯನ್ನು ತೊರೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ವಿ ಸೋಮಣ್ಣ ಅವರೇ ಡಿಸೆಂಬರ್ 6ರಂದು ಈ ಬಗ್ಗೆ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಇದೀಗ ಸೋಮಣ್ಣ ಅವರ ಪುತ್ರ ಉಲ್ಟಾ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ 6ರ ಬಗ್ಗೆ ಮಾತನಾಡಿದ ಅರುಣ್ ಸೋಮಣ್ಣ, ಅವರು ಡಿಸೆಂಬರ್ 6ರಂದು ನಿರ್ಧಾರ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ವರಿಷ್ಠರು, ಹಿರಿಯ ನಾಯಕರ ಜೊತೆಗೆ ಮಾತನಾಡಿ ಹೇಳುತ್ತೇವೆ ಎಂದಿದ್ದಾರೆ. ಇದೇ ವೇಳೆ ಶ್ರೀಗಳ ಬಳಿ ದುಃಖ ತೋಡಿಕೊಂಡ ವಿಚಾರದಲ್ಲಿ ಮಾತನಾಡಿ, ದುಃಖ, ಅನಿವಾರ್ಯತೆ ಬಗ್ಗೆ ನನಗೆ ಗೊತ್ತಿಲ್ಲ. ಅವರ ಅಂತರಾಳದಲ್ಲಿ ಏನಿದೆ, ಅದು ನನಗೆ ಗೊತ್ತಿಲ್ಲ ಆ ಎಲ್ಲವನ್ನು ನಾನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಇನ್ನು ರೇಣುಕಾಚಾರ್ಯ ಅವರ ಬಗ್ಗೆ ಮಾತನಾಡಿ, ತಂದೆಯ ಹುಟ್ಟುಹಬ್ಬಕ್ಕೆ ಬಂದು ಅವರೇ ವಿಶ್ ಮಾಡಿ ಹೋಗಿದ್ದಾರೆ. ಪಕ್ಷದ ವರಿಷ್ಠರಿದ್ದಾರೆ, ಪಕ್ಷದ ಹೈಕಮಾಂಡ್ ಇದೆ. ಯಾರು ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಹೈಕಮಾಂಡ್ ಗೆ ಗೊತ್ತು. ಪಕ್ಷೆ ವರಿಷ್ಠರೆ ನಿರ್ಣಯ ಕೈಗೊಳ್ಳುತ್ತಾರೆ. ರೇಣುಕಾಚಾರ್ಯ ಅವರು ನಮ್ಮ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ತಂದೆ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಈಗಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಅವರ ಮನಸ್ಸಿನ ಅನಿಸಿಕೆಯನ್ನು ಅವರು ಹೊರ ಹಾಕಿದ್ದಾರೆ ಎಂದಿದ್ದಾರೆ.