ಹಾಸನ: ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇನ್ನು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ನಿಲ್ಲುವಂತೆ ಇಲ್ಲ. ಆದ್ರೆ ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆಯೂ ಬರ್ತಾ ಇದೆ. ಈ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿರೋದು ದೊಡ್ಡ ಗೌಡರ ಕುಟುಂಬಕ್ಕೆ ಆಘಾತ ತಂದಿದೆ.
ಈ ಸಂಬಂಧ ಮಾತನಾಡಿರುವ ಹೆಚ್ ಡಿ ರೇವಣ್ಣ, ಯಾರೇ ಆಗಲಿ ಕಾನೂನಿಗೆ ತಲೆ ಬಾಗಲೇಬೇಕು. ನಾವೂ ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ನನಗೆ ಇನ್ನೂ ಹೈಕೋರ್ಟ್ ತೀರ್ಪಿನ ಪ್ರತಿ ಸಿಕ್ಕಿಲ್ಲ. ಯಾರೇ ಆಗಲಿ ಕಾನೂನಿಗೆ ಗೌರವ ನೀಡಲೇಬೇಕು. ಸರಿಯಾದ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ಶಾಸಕ ಎ ಮಂಜು ಈ ಮೊದಲು ಬಿಜೆಪಿಯಲ್ಲಿದ್ದಾಗ ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದರು. ಈಗ ಜೆಡಿಎಸ್ ನಿಂದ ಶಾಸಕರಾಗಿದ್ದಾರೆ. ಈ ಬಗ್ಗೆಯೂ ಮಾತನಾಡಿರುವ ರೇವಣ್ಣ ಅವರು, ಯಾರೂ ಯಾವ ವಿಚಾರಕ್ಕೆ ಏನು ಮಾಡಿದರೋ ಗೊತ್ತಿಲ್ಲ. ಎ ಮಂಜು ಏನು ಹೇಳಿದ್ದಾರೋ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ಅವರ ವಕೀಲರಿದ್ದಾರೆ. ಅವರೇ ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದಿದ್ದಾರೆ.