ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರ ಡಿ ಕೆ ಶಿವಕುಮಾರ್ ಹೇಳಿದ್ದೇನು ?

suddionenews
2 Min Read

 

ಬೆಂಗಳೂರು: ಕಲ್ಲಿದ್ದಲು ಕೊರತೆ, ವಿದ್ಯುತ್ ಕಡಿತ ವಿಚಾರವಾಗಿ ನಾನು ಕೂಡ ವಿಶ್ಲೇಷಣೆ ಮಾಡುತ್ತಿದ್ದೇನೆ. ನಮ್ಮ ಕಾಲದಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿ, ಅದನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು ಎಂದು ಸದಾಶಿವ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸದ್ಯ ನನಗೆ ಬಂದಿರುವ ಮಾಹಿತಿ ಪ್ರಕಾರ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ.

ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂದು ಬಿಂಬಿಸಿದರೆ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಈ ಸರ್ಕಾರ ಸತ್ತವರಿಗೇ ಪರಿಹಾರ ನೀಡಿಲ್ಲ. ಇನ್ನು ಮಳೆ ಸಂತ್ರಸ್ತರಿಗೆ ಕೊಡುತ್ತಾರೆಯೇ? ಈ ಸರಕಾರಕ್ಕೆ ಬಡವರಿಗೆ ನೆರವಾಗುವ ಅನುಭವವಾಗಲಿ, ಮನಸ್ಥಿತಿಯಾಗಲಿ ಇಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ.

ಸಿದ್ದರಾಮಯ್ಯ ಅವರು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ನಮ್ಮ ಬಳಿ ಯಾವುದೇ ಚರ್ಚೆ ಆಗಿಲ್ಲ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದು ಕೇವಲ ಊಹಾಪೋಹ ಮಾತ್ರ. ಈ ವಿಚಾರವಾಗಿ ಪಕ್ಷ ಉಂಟು, ನಮ್ಮ ಶಾಸಕಾಂಗ ಪಕ್ಷದ ನಾಯಕರು ಉಂಟು. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಇಡೀ ದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಅವರೇ ಕೆಲಸ ಮಾಡುತ್ತಿದ್ದು, ಅವರ ಮುಂದಾಳತ್ವ ಬೇಕು ಎಂಬುದು ಇಡೀ ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರವಾಗಿ ಕೆಲವೊಂದು ಪ್ರಕ್ರಿಯೆಗಳಿವೆ. ಆ ಮೂಲಕ ಆಯ್ಕೆ ನಡೆಯುತ್ತದೆ.

ಉಪಚುನಾವಣೆಯಲ್ಲಿ ಬಿಜೆಪಿ ಅವರು ತಮ್ಮ ಬಂಡಾಯ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಸಿರುವುದು ಅವರ ತಂತ್ರಗಾರಿಕೆ. ಅವರ ರಾಜಕೀಯ ತಂತ್ರಗಾರಿಕೆ ಅವರು ಮಾಡಿಕೊಳ್ಳಲಿ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಲಿ. ಯಾರ ಮನಸ್ಸಾದರೂ ಓಲೈಸಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಅವರ ಪಕ್ಷ ರಾಜಕಾರಣದ ಗೊಡವೆ ನಮಗೆ ಬೇಡ ಎಂದರು.

Share This Article
Leave a Comment

Leave a Reply

Your email address will not be published. Required fields are marked *