ಬೆಂಗಳೂರು: ರಾಜ್ಯದಲ್ಲಿ ನಾಳೆ ನೂತನ ಸರ್ಕಾರ ರಚನೆಯಾಗಲಿದೆ. ಸಿಎಂ, ಡಿಸಿಎಂ ಸೇರಿದಂತೆ ಸಚಿವರುಗಳು ನಾಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಾಳೆ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಕಾರ್ಯಕ್ರಮ ಮಾಡಲಾಗುತ್ತದೆ. ಹೀಗಾಗಿ ಎಲ್ಲರನ್ನು ಡಿಕೆ ಶಿವಕುಮಾರ್ ಆಹ್ವಾನ ಮಾಡುತ್ತಿದ್ದಾರೆ. ಜೊತೆಗೆ ಗ್ಯಾರಂಟಿಗಳ ಬಗ್ಗೆಯೂ ಗ್ಯಾರಂಟಿ ನೀಡಿದ್ದಾರೆ.
ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾಳೆ ಬೆಳಗ್ಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದೆ. ನಾಳೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವಿದೆ. ಎಲ್ಲರೂ ತಪ್ಪದೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರಬೇಕು. ನಾಳೆ ಬೆಳಗ್ಗೆ 11 ಗಂಟೆಯ ಒಳಗೆ ಕಂಠೀರವ ಸ್ಟೇಡಿಯಂಗೆ ಬನ್ನಿ. ತಡವಾಗಿ ಬಂದರೆ ಒಳಗೆ ಬಿಡುವುದಿಲ್ಲ.
ಹಾಗೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ಕಾರ್ಯಕ್ರಮಕ್ಕೆ ಬನ್ನಿ. ಅನ್ಯಥಾ ಭಾವಿಸಬೇಡಿ. ಇನ್ನು ರಾಜ್ಯದ ಜನತೆಗೆ ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ರಾಹುಲ್ ಗಾಂಧಿಯವರು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದಾರೆ. ಹಾಗೇ ಪ್ರಿಯಾಂಕ ಗಾಂಧಿಯವರು ಗೃಹಿಣಿಯರಿಗೆ 2 ಸಾವಿರ ಘೋಷಣೆ ಮಾಡಿದ್ದಾರೆ. ನಾನು ಸಿದ್ದರಾಮಯ್ಯ ಸೇರಿ, ಗೃಹಜ್ಯೋತಿ ಘೋಷಣೆ ಮಾಡಿದ್ದೇವೆ. ಎಲ್ಲದನ್ನು ಈಡೇರಿಸುತ್ತೇವೆ ಎಂದಿದ್ದಾರೆ.