ಮೈಸೂರು: ಮಾಜಿ ಸಂಸದ ಆರ್ ಧ್ರುವನಾರಾಯಣ್ ಇತ್ತಿಚೆಗೆ ಅನಾರೋಗ್ಯದಿಂದ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ನಂಜನಗೂಡು ಕ್ಷೇತ್ರಕ್ಕೆ ಅವರ ಮಗ ದರ್ಶನ್ ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಬೇಕೆಂಬ ಡಿಮ್ಯಾಂಡ್ ಕಾರ್ಯಕರ್ತರಿಂದ ಶುರುವಾಗಿತ್ತು. ಅದು ಸತ್ಯವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಅದಕ್ಕೂ ಮುನ್ನ ದರ್ಶನ್ ಧ್ರುವನಾರಾಯಣ್ ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ್ದಾರೆ.

ಇಂದು ಎಚ್ ಡಿ ಕೋಟೆ ಕ್ರೀಡಾಂಗಣದಲ್ಲಿ ದಿವಂಗತ ಧ್ರುವನಾರಾಯಣ್ ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್ ಧ್ರುವನಾರಾಯಣ್, “ತಂದೆಯವರ ಅಂತಿಮ ದರ್ಶನಕ್ಕೆ ರಾಜ್ಯಾದ್ಯಂತ ಜನ ಬಂದಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿದರು, ಧೈರ್ಯ ತುಂಬಿದರು. ಸಿದ್ದರಾಮಯ್ಯ, ಜಾರಕಿಹೊಳಿ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ” ಎಂದು ಆ ದಿನಗಳನ್ನು ನೆನೆದರು.

ಇನ್ನು ಇದೆ ವೇಳೆ ರಾಜಕೀಯದ ಬಗ್ಗೆ ಮಾತನಾಡಿ, ನಮ್ಮ ತಂದೆ ಯಾವತ್ತೂ ಕೂಡ ನಮಗೆ ರಾಜಕೀಯದ ವಿಚಾರವನ್ನು ಹೇಳಿಕೊಡಲಿಲ್ಲ. ಅವರ ಜನಸೇವೆಯನ್ನು ನೋಡಿ ಬೆಳೆದವರು ನಾವೂ. ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು. ಆದರೆ ಮಾನಸಿಕವಾಗಿ ಇದ್ದಾರೆ. ನಮ್ಮ ಇಡೀ ಕುಟುಂಬ ಜನ ಸೇವೆ ಮಾಡುತ್ತಾ ಬಂದಿದ್ದೇವೆ. ಇನ್ನಷ್ಟು ಪ್ರಾಮಾಣಿಕ ಪ್ರಯತ್ನ ಮಾಡುವ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ.

