ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿದ್ದು, ಅಧಿಕಾರವಹಿಸಿಕೊಂಡ ಮೇಲೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನೇಮಿಸಿದ್ದ ತಾತ್ಕಾಲಿಕ ಹುದ್ದೆಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ಸಿಂಪತಿ ಮೇಲೆ ಕೆಲಸ ಪಡೆದುಕೊಂಡಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕೂಡ ಕೆಲಸ ಕಳೆದುಕೊಂಡಿದ್ದಾರೆ.
ಈ ಸಂಬಂಧ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಮಾತನಾಡಿ, ಸರ್ಕಾರ ಬದಲಾದಾಗ ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಾಮಾನ್ಯಾವಾಗಿ ರದ್ದಾಗುತ್ತವೆ. ಕೆಲಸದಿಂದ ಬಿಡುಗಡೆ ಮಾಡುವ ವಿಚಾರವನ್ನು ನಾವೂ ಈಗಾಗಲೇ ನೂತನ ಕುಮಾರಿ ಅವರಿಗೆ ತಿಳಿಸಿದ್ದೇವೆ. ನಮ್ಮನ್ನು ಕೆಲಸದಿಂದ ಮುಂದುವರೆಸಿ ಎಂದು ಆಕೆ ಏನಾದರೂ ಡಿಸಿ ಕಚೇರಿಗೆ ಅರ್ಜಿ ಸಲ್ಲಿಸಿದರೆ ನಾವೂ ಅದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.
ಇನ್ನು ನೂತನ ಅವರ ಕೆಲಸ ಹೋಗಿದ್ದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಕೂಡ ಸರಿಯಾದ ರೀತಿಯಲ್ಲಿಯೇ ಟಾಂಗ್ ನೀಡಿದ್ದಾರೆ. ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರುವ ಬಿಜೆಪಿಗೆ ನೀತಿ ಮತ್ತು ನಿಯಮವನ್ನು ಅಧ್ಯಯನ ಮಾಡಲು ಸಮಯವಿರಲು ಸಾಧ್ಯವೆ..? ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ಹುದ್ದೆಗಳಹ ರದ್ದಾಗುತ್ತವೆ. ಬದುಕಿಗೆ ಶಾಶ್ವತ ಪರಿಹಾರ ತೋರಿಸದೆ, ಇಂತಹ ಪೇಪರ್ ಚಾಕ್ಲೇಟ್ ನೀಡುವ ಮೂಲಕ ಪ್ರವೀಣ್ ನೆಟ್ಟಾರು ಹೆಂಡತಿಗೆ ಬಿಜೆಪಿ ಮೋಸ ಮಾಡಿದೆ ಎಂದು ತಿರುಗೇಟು ನೀಡಿದೆ.