ಬೆಂಗಳೂರು : ಇಲ್ಲಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ನಂದಮೂರಿ ತಾರಕ ರತ್ನ ಅವರ ಆರೋಗ್ಯ ಸ್ಥಿತಿಯನ್ನು ನಟ ಶಿವರಾಜ್ ಕುಮಾರ್ ವಿಚಾರಿಸಿದರು.
ಭಾನುವಾರ ಆಸ್ಪತ್ರೆಗೆ ತೆರಳಿದ್ದ ಶಿವರಾಜ್‌ಕುಮಾರ್, ಬಾಲಕೃಷ್ಣ ಜತೆಗೆ ತಾರಕರತ್ನ ಅವರನ್ನು ನೋಡಿದ್ದಾರೆ. ಅವರ ಆರೋಗ್ಯದ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆದಿದ್ದಾರೆ. ತಾರಕರತ್ನ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಬಳಿಕ ಬಾಲಕೃಷ್ಣ ಜತೆ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನು ತಾರಕರತ್ನರನ್ನು ನೋಡಿದೆ. ಅವರ ಸ್ಥಿತಿ ಸ್ವಲ್ಪ ಸುಧಾರಿಸಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಚಿಕಿತ್ಸೆ ನಂತರ ವೈದ್ಯರು ಏನು ಹೇಳುತ್ತಾರೆಂದು ನೋಡೋಣ. ಅವರು ಏನು ಹೇಳುತ್ತಾರೆಂದು ಊಹಿಸಲು ಸಾಧ್ಯವಿಲ್ಲ,” ಎಂದು ಶಿವರಾಜ್‌ಕುಮಾರ್ ಹೇಳಿದರು.
ಬಳಿಕ ಮಾತನಾಡಿದ ಬಾಲಕೃಷ್ಣ, ”ಶಿವಣ್ಣ ಬಂದಿದ್ದು ತುಂಬಾ ಖುಷಿ ತಂದಿದೆ. ಶಿವಣ್ಣ ನನ್ನ ಕಿರಿಯ ಸಹೋದರ. ಅವರ ಮತ್ತು ನಮ್ಮ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆ ಮತ್ತು ರಾಜಕುಮಾರ್ ನಡುವಿನ ಸಂಬಂಧ ಎಲ್ಲರಿಗೂ ಗೊತ್ತು. ನನ್ನ ತಮ್ಮನಿಗೆ ಇಲ್ಲಿ ಅಪಘಾತವಾದಾಗ ರಾಜಕುಮಾರ್ ಅವರೇ ಆಸ್ಪತ್ರೆಗೆ ಬಂದಿದ್ದರು. ದುರದೃಷ್ಟವಶಾತ್ ನಮ್ಮೆಲ್ಲರ ಪುನೀತ್ ಇಂದು ನಮ್ಮೊಂದಿಗಿಲ್ಲ ಎನ್ನುವುದು ದುಃಖಕರ. ಆಗ ನಾನು ಇಲ್ಲಿಗೆ ಬಂದಿದ್ದೆ. ನಮ್ಮ ಕೌಟುಂಬಿಕ ಬಾಂಧವ್ಯ ಹೀಗೇ ಮುಂದುವರೆದಿದೆ. ಇದು ಯಾವುದೇ ಜನ್ಮದ ಅವಿನಾಭಾವ ಸಂಬಂಧ ಎಂದು ನನಗೆ ತೋರುತ್ತದೆ, ”ಎಂದು ಅವರು ಹೇಳಿದರು.
ತಾರಕರತ್ನ ಆರೋಗ್ಯ ಸ್ಥಿತಿ ಕುರಿತು ಮಾತನಾಡಿದ ಬಾಲಕೃಷ್ಣ, ಕುಪ್ಪಂನಲ್ಲಿ ಲೋಕೇಶ್ ಬಾಬು ಆರಂಭಿಸಿದ ಪಾದಯಾತ್ರೆಯಲ್ಲಿ ನನ್ನ ಅಣ್ಣ ಮೋಹನಕೃಷ್ಣ ಅವರ ಮಗ ತಾರಕರತ್ನ ಭಾಗವಹಿಸಿದ್ದರು. ಅಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದರು. ಸ್ವಲ್ಪ ಸಮಯದವರೆಗೆ ಹೃದಯ ಬಡಿತವೂ ನಿಂತಿತ್ತು. ವಿಚಿತ್ರವೆಂದರೆ, ಹೃದಯ ಮತ್ತೆ ಬಡಿಯತೊಡಗಿತು. ಪಿಇಎಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಶಿವಾ ರೆಡ್ಡಿ ತಂಡ ಬಂದು ಅವರಿಗೆ ಮರುಜೀವ ನೀಡಿತು. ಒಂದು ದೊಡ್ಡ ಪವಾಡ ಸಂಭವಿಸಿತು.
ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದರು. ನಮ್ಮ ಹೈದರಾಬಾದ್ ನ ವೈದ್ಯರೂ ಸಹಾ ಇಲ್ಲೇ ಇದ್ದಾರೆ. ಅವರೆಲ್ಲರೂ ಈ ಆಸ್ಪತ್ರೆ ಶಿಫಾರಸು ಮಾಡಿದರು. ಇಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆರೋಗ್ಯದಲ್ಲಿ ಚೇತರಿಕೆಗಾಗಿ ಕಾಯುತ್ತಿದ್ದೇವೆ,” ಎಂದರು.
ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದು, ಅಭಿಮಾನಿಗಳ ಆಶೀರ್ವಾದ ತಾರಕರತ್ನ ಅವರನ್ನು ಬದುಕಿಸಲಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ. ತಾರಕರತ್ನ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಬಯಸುತ್ತಾರೆ ಎಂದರು.