ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘ (ರಿ.), ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್
ರತ್ನಗಳು ಆಕರ್ಷಕವಾಗಿ ಕಾಣುವ ಹಾಗೂ ಅತಿ ಬೆಲೆ ಬಾಳುವ ಖನಿಜಗಳು. ಉಪಯೋಗ, ಹೊಳಪು ಮತ್ತು ಲಭ್ಯತೆಗೆ ತಕ್ಕಂತೆ ರತ್ನಗಳ ಬೆಲೆಯನ್ನು ಅಳೆಯಲಾಗುವುದು. ಆಭರಣಗಳಿಗಾಗಿ ಇವುಗಳನ್ನು ಕತ್ತರಿಸಿ ಪಾಲೀಸ್ ಮಾಡಲಾಗುವುದು. ಹೆಚ್ಚಿನ ರತ್ನಗಳು, ಖನಿಜದ ಸ್ಫಟಿಕದ ರೂಪದಲ್ಲಿರುತ್ತವೆ. ಒಂದು ನಿರ್ದಿಷ್ಟ ರಾಸಾಯನಿಕ ಬಂಧ ಹಾಗೂ ಸ್ಪಷ್ಟ ಅಣು ರಚನೆಯಿಂದಾಗಿ, ರತ್ನದ ಕಲ್ಲು ಪಾರದರ್ಶಕವಾಗಿರುತ್ತದೆ. ರತ್ನದ ಕಲ್ಲುಗಳಿಗೆ ಬಳಸುವ 120 ಖನಿಜಗಳ ಪೈಕಿ ಕೇವಲ 25 ಮಾದರಿಗಳನ್ನು ಇಂದು ಆಭರಣಗಳ ತಯಾಕೆಯಲ್ಲಿ ಬಳಸುತ್ತಾರೆ. ವಜ್ರ, ಪಚ್ಚೆ, ಮಾಣಿಕ್ಯ ಮತ್ತು ನೀಲಮಣಿಗಳು ಅತಿ ಬೆಳೆಬಾಳುವ ರತ್ನಗಳಲ್ಲಿ ಮುಖ್ಯವಾದವು. ಪುಷ್ಯರಾಗ, ಕ್ಷೀರಸ್ಫಟಿಕ ಮತ್ತು ಪದ್ಮರಾಗ ಮಣಿಗಳು ಎರಡನೇ ಗುಣಮಟ್ಟದ ರತ್ನಗಳು.
ಹೆಚ್ಚಿನ ರತ್ನಗಳು, ಸಾಮಾನ್ಯ ಖನಿಜಗಳ ಅತಿಸಾಮಾನ್ಯ ರೂಪದಲ್ಲಿರುತ್ತವೆ. ಅಂದರೆ ವಜ್ರಗಳು ಶುದ್ಧ ಇಂಗಾಲದ, ಗಟ್ಟಿಯಾದ ಮತ್ತು ಹೊಳೆಯುವ ಹರಳು ಎಂದರ್ಥ. ಆದರೆ ಸಾಮಾನ್ಯ ಗ್ರಾಫೈಟ್ ಬೂದು ಬಣ್ಣದಾಗಿದ್ದು, ನೋಡಲು ಆಕರ್ಷಕವೆನಿಸುವುದಿಲ್ಲ. ಪ್ರಾಕೃತಿಕವಾಗಿ ದೊರೆಯುವ ವಜ್ರ, ಗಾಜಿನ ತುಂಡುಗಳಂತಿರುತ್ತವೆ. ಅದನ್ನು ಕತ್ತರಿಸಿ, ಪಾಲೀಷ್ ಮಾಡಿದಾಗ ಕಣ್ಣು ಕುಕ್ಕುವಂತೆ ಹೊಳೆಯುತ್ತದೆ. ಅತಿ ಅಮೂಲ್ಯದ ವಜ್ರ ನೀಲಿ ಬಣ್ಣ ಅಥವಾ ಬಣ್ಣವನ್ನು ಹೊಂದಿರುವುದಿಲ್ಲ. ವಜ್ರವು ಖನಿಜಗಳಲ್ಲೇ ಅತಿ ಕಠಿಣ ಎನ್ನಬಹುದು. ಅದನ್ನು ಇನ್ನೊಂದು ವಜ್ರದಿಂದಷ್ಟೇ ಕತ್ತರಿಸಲು ಸಾಧ್ಯ. ಜ್ವಾಲಾಮುಖಿಗಳ ಒಳಪದರದಲ್ಲಿ ಅತ್ಯಂತ ಬಿಸಿ ಹಾಗೂ ಒತ್ತಡದಲ್ಲಿ ಇವು ರೂಪುಗೊಳ್ಳುವುದು.
ಸ್ಫಟಿಕ ಶಿಲೆಗಳು ಮಣ್ಣು ಮತ್ತು ಕಲ್ಲುಗಳಲ್ಲಿ ಸಾಮಾನ್ಯವಾಗಿ ದೊರೆಯುವ ಖನಿಜ. ಶುದ್ಧ ಸ್ಫಟಿಕ ಶಿಲೆಯ ಹರಳಿನಲ್ಲಿ ಕಬ್ಬಿಣ ಹಾಗೂ ಮ್ಯಾಂಗನೀಸ್ನ ಅಂಶಗಳೂ ಇರುತ್ತವೆ. ಸ್ಫಟಿಕದ ಹರಳು ನೇರಳೆ ಬಣ್ಣದಲ್ಲಿದ್ದರೆ, ಅದನ್ನು ಪದ್ಮರಾಗ ಮಾಣಿಕ್ಯ ಎನ್ನುತ್ತಾರೆ. ಇವು ಮುಖ್ಯವಾಗಿ ಉರಾಲ್ ಪರ್ವತಗಳು, ಭಾರತ, ಅಮೇರಿಕ, ಉರುಗ್ವೆ ಮತ್ತು ಬ್ರೆಜಿಲ್ನಲ್ಲಿ ಸಿಗುತ್ತವೆ.
ಕೋರಂಡಮ್, ಅಗ್ನಿಶಿಲೆ ಹಾಗೂ ರೂಪಾಂತರಗಳಲ್ಲಿ ದೊರೆಯುವ ಇನ್ನೊಂದು ಸಾಮಾನ್ಯ ಖನಿಜ. ವಜ್ರದ ಬಳಿಕ ಇದೇ ಕಠಿಣವಾದ ಖನಿಜ. ಕೋರಂಡಮ್ನಲ್ಲಿ ಕ್ರೋಮಿಯಂ ಆಕ್ಸೈಡ್ನ ಅಂಶವಿದ್ದರೆ ಅದು ಕೆಂಪು ಬಣ್ಣ ಪಡೆದು ಕೆಂಪು ಪದ್ಮರಾಗ ಮಾಣಿಕ್ಯ ಎನಿಸಿಕೊಳ್ಳುತ್ತದೆ. ಇವು ಮುಖ್ಯವಾಗಿ ಬರ್ಮಾದಲ್ಲಿ ಸಿಗುತ್ತವೆ. ಕಬ್ಬಿಣ ಮತ್ತು ಟೈಟಾನಿಯಂನ ಅಂಶಗಳಿದ್ದರೆ, ನೀಲಮಣಿ ಎನಿಸಿಕೊಳ್ಳುತ್ತದೆ. ಇವು ಕೆಂಪು ಹೊರತುಪಡಿಸಿ ಯಾವುದೇ ಬಣ್ಣದಲ್ಲಿರಬಹುದು. ಆದರೆ ಸಾಮಾನ್ಯವಾಗಿ ಕಡುನೀಲಿ ಬಣ್ಣದಲ್ಲಿ ಇರುತ್ತದೆ. ಹಳದಿ ಬಣ್ಣದಲ್ಲಿ ಇರುವ ನೀಲಮಣಿಗಳೂ ಇವೆ.
ಪಚ್ಚೆ ರತ್ನ ಮುಖ್ಯವಾಗಿ ಗ್ರಾನೈಟ್ ಅದಿರುಗಳಲ್ಲಿರುತ್ತವೆ. ಮರಕತ ಮತ್ತು ನೀಲ ರತ್ನ ಇದರ ಎರಡು ವಿಧಗಳು. ಮರಕತ ನಿಷ್ಕಲ್ಮಶ ಹಸಿರು ಬಣ್ಣದಲ್ಲಿದ್ದು, ಕೊಲಂಬಿಯ, ರಷ್ಯದ ಉರಲ್ ಪರ್ವತಗಳು, ಜಿಂಬಾಬ್ವೆ ಮತ್ತು ಮತ್ತು ಆಸ್ಟ್ರೇಲಿಯದಲ್ಲಿ ನೈಸರ್ಗಿಕವಾಗಿ ದೊರೆಯುತ್ತವೆ. ನೀಲ ರತ್ನ ತಿಳಿ ನೀಲಿ ಬಣ್ಣದಲ್ಲಿರುತ್ತದೆ.
ಎಲ್ಲ ರತ್ನಗಳೂ ಖನಿಜಗಳಲ್ಲ. ಮುತ್ತು ಮತ್ತು ಶಿಲಾರಾಳ ಅಥವಾ ಅಂಬರು, ನಿಜಾರ್ಥದಲ್ಲಿ ಖನಿಜಗಳಲ್ಲ. ಅವುಗಳ ರಚನೆಯ ಹಿಂದೆ ಸಾವಯವ ಜೀವಿಗಳ ಹಿನ್ನೆಲೆಯಿದೆ. ಅವು ಪ್ರಾಣಿ ಮತ್ತು ಸಸ್ಯಗಳ ನೆರವಿನಿಂದ ರೂಪು ಪಡೆಯುತ್ತವೆ. ಉದಾಹರಣೆಗೆ ಮುತ್ತು, ಕಪ್ಪೆ ಚಿಪ್ಪು ಮೀನಿನ ಚಿಪ್ಪಿನೊಳಗೆ ಇರುವಂಥದ್ದು. ಅದೇ ರೀತಿ ಅಂಬರು, ದೇವದಾರು ಹಾಗೂ ಸೂಚಿಪರ್ಣ ವೃಕ್ಷಗಳ ರಾಳದಿಂದ ರೂಪು ಪಡೆಯುತ್ತದೆ. ಇವು ವರ್ಷಾನುಗಟ್ಟಲೆ ಕಲ್ಲುಗಳ ನಡುವೆ ಸಮಾಧಿಯಾಗಿ ರತ್ನ ಎನಿಸಿಕೊಳ್ಳುತ್ತದೆ.
ಸೂಕ್ಷ್ಮ ವಜ್ರಗಳನ್ನು ಗ್ರಾಫೈಟ್ನಿಂದ ಪ್ರಯೋಗಶಾಲೆಗಳಲ್ಲೇ ಪಡೆಯಬಹುದು. ಇವನ್ನು ದಂತ ವೈದ್ಯರು ಹಲ್ಲು ಕತ್ತರಿಸುವ ಉಪಕರಣ, ಗಾಜು ಕತ್ತರಿಸುವ ಹಾಗೂ ಬಂಡೆಗಳನ್ನು ಕೊರೆಯುವ ಗರಗಸ ಮತ್ತು ಡ್ರಿಲ್ಬಿಟ್ಗಳಲ್ಲಿ ಬಳಸುತ್ತಾರೆ. ಕೃತಕ ಮಾಣಿಕ್ಯವನ್ನು ಲೇಸರ್ಗಳಲ್ಲಿ ಬಳಸುತ್ತಾರೆ. ನೀಲಮಣಿ ಹಾಗೂ ಪಚ್ಚೆ ರತ್ನಗಳನ್ನೂ ಯಶಸ್ವಿಯಾಗಿ ತಯಾರಿಸಬಹುದು. ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪೆನಿ ಮೊದಲ ಬಾರಿಗೆ ಕೃತಕ ರತ್ನಗಳ ತಯಾರಿಕೆಯನ್ನು 1955ರಲ್ಲಿ ಆರಂಭಿಸಿತು.
ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘ (ರಿ.), ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821



