ಬೆಂಗಳೂರು: ಒಂದು ಕಡೆ ಕೊರೊನಾ ಹೆಚ್ಚಳದ ಭೀತಿ.. ಮತ್ತೊಂದು ಕಡೆ ಒಮಿಕ್ರಾನ್ ಹೆಚ್ಚಳದ ಆತಂಕ.. ಸದ್ಯ ಸರ್ಕಾರವೂ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.
ಒಂದು ವೇಳೆ ಕಠಿಣ ನಿರ್ಧಾರವನ್ನ ತೆಗೆದುಕೊಂಡರೆ ವ್ಯಾಪಾರ ವಹಿವಾಟಿಗೂ ಹೊಡೆತ ಬೀಳುತ್ತೆ. ಜೊತೆಗೆ ಸಾಕಷ್ಟು ಜನರ ಜೀವನವೂ ಅತಂತ್ರಕ್ಕೆ ಬಂದು ನಿಲ್ಲುತ್ತೆ. ಹೀಗಾಗಿ ಎಲ್ಲವನ್ನು ಯೋಚನೆ ಮಾಡಿ ಸರ್ಕಾರ ವೈರಸ್ ನಿಯಂತ್ರಣದ ಮಾರ್ಗವನ್ನ ಸಿದ್ಧ ಮಾಡಲಿದೆ. ಈ ಬೆನ್ನಲ್ಲೇ ಎಲ್ಲರಿಗೂ ಕಾಡುತ್ತಿರವ ಪ್ರಶ್ನೆ ಶಾಲೆಗಳ ಕಥೆ ಏನು ಎಂಬುದು.
ಯಾಕಂದ್ರೆ ಕಳೆದ ಎರಡು ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಕಷ್ಟು ಕುಸಿತಗೊಂಡಿದೆ. ಸರಿಯಾಗಿ ತರಗತಿಗಳು ನಡೆದಿಲ್ಲ, ಪರೀಕ್ಷೆಯೂ ನಡೆದಿಲ್ಲ. ಈ ವರ್ಷ ಹೇಗೋ ವೈರಸ್ ಕಡಿಮೆಯಾದ ಕಾರಣ ಶಾಲೆಗಳು ನಡೆಯುತ್ತಿವೆ. ಆದ್ರೆ ಈಗ ಮತ್ತೆ ಹೆಚ್ಚಾಗುತ್ತಿರುವ ಕಾರಣ ಮಕ್ಕಳ ಶೈಕ್ಷಣಿಕ ವರ್ಷ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಮೂಲಗಳ ಪ್ರಕಾರ ಈ ಬಾರಿ ಪರೀಕ್ಷೆ ನಡೆಸಿಯೇ ಶೈಕ್ಷಣಿಕ ವರ್ಷ ಮುಗಿಸಲಾಗುತ್ತೆ ಎನ್ನಲಾಗುತ್ತಿದೆ.
ಈಗಾಗಲೇ ಆನ್ಲೈನ್ ಕ್ಲಾಸ್, ಆಫ್ ಲೈನ್ ಕ್ಲಾಸ್ ಅಂತ ಒಂದಷ್ಟು ಚಾಪ್ಟರ್ ಗಳು ಮುಗಿದಿವೆ. ಹೀಗಾಗಿ ಫೆಬ್ರವರಿ ಕೊನೆಯಲ್ಲೇ ಪರೀಕ್ಷೆ ನಡೆಸಬಹುದು ಎನ್ನಲಾಗುತ್ತಿದೆ. 1 ರಿಂದ 9ನೇ ತರಗತಿ ಮಕ್ಕಳಿಗೆ ಫೆಬ್ರವರಿ 10 ರಂದು ಪರೀಕ್ಷೆ ಮುಗಿಸಲಾಗುತ್ತೆ ಎನ್ನಲಾಗುತ್ತಿದೆ. ಶಿಕ್ಷಣ ಸಚಿವ ನಾಗೇಶ್ ಅವರಿಗೂ ಕೊರೊನಾ ದೃಢವಾಗಿರುವ ಕಾರಣ ಇನ್ನೆರೆಡು ದಿನಗಳ ಬಳಿಕ ಚರ್ಚಿಸಿ ನಿರ್ಧಾರ ತಿಳಿಸಲಾಗುತ್ತೆ ಎಂಬ ಮಾತುಗಳು ಕೇಳಿ ಬಂದಿದೆ.