ಹೊಸದಿಲ್ಲಿ: ಮುಂಗಾರು ಆರಂಭದಲ್ಲಿಯೇ ಜೋರಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನದಲ್ಲಿ ಭಾರೀ (64.5 ರಿಂದ 114.5 ಮಿಮೀ) ರಿಂದ ಅತಿ ಹೆಚ್ಚು (115.6 ರಿಂದ 204.4 ಮಿಮೀ) ಮಳೆಯಾಗಲಿದ್ದು, ಈ ಪೈಕಿ ಮೂರು ದಿನ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಗುಡುಗು ಸಹಿತ, ಮೋಡ ಕವಿದ ವಾತಾವರಣವನ್ನು ಇರಲಿದೆ. ಮಧ್ಯಪ್ರದೇಶದ ಎಂಟು ಜಿಲ್ಲೆಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದ ತತ್ತರಿಸಿರುವ ಮುಂಬೈ, ನಗರ ಮತ್ತು ಉಪನಗರಗಳಲ್ಲಿ ಸಾಧಾರಣ ಮಳೆಯಾಗಿದೆ. ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹೇಳಿದೆ.
ಇನ್ನು ಕರ್ನಾಟಕದಲ್ಲಿ ಶನಿವಾರವೂ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಮತ್ತು ಗುಡ್ಡಗಾಡು ಜಿಲ್ಲೆಗಳ ಜತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳೂ ಮಳೆಯ ಅಬ್ಬರಕ್ಕೆ ತುತ್ತಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ರಾಜಧಾನಿ ಬೆಂಗಳೂರು ತಂಪಾದ ಗಾಳಿ ಮತ್ತು ತುಂತುರು ಮಳೆಯಿದೆ.
ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಬಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಏರುತ್ತಿರುವ ತಾಪಮಾನಕ್ಕೆ ಹೆಸರುವಾಸಿಯಾಗಿರುವ ಕಲಬುರಗಿಯಲ್ಲಿ ಪ್ರಸ್ತುತ ಗಿರಿಧಾಮದಂತಹ ವಾತಾವರಣವಿದೆ. ಕಲಬುರಗಿಯ ಜಿಲ್ಲಾಧಿಕಾರಿಗಳು ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.