ಅಲಹಾಬಾದ್.ಆಗಸ್ಟ್.25: ಪ್ರಯಾಗ್‌ರಾಜ್‌ನ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬರು ನಿಗದಿತ ಶಾಲಾ ಸಮವಸ್ತ್ರದೊಂದಿಗೆ ಹೆಚ್ಚುವರಿಯಾಗಿ ಹಿಜಾಬ್ (ಸ್ಕಾರ್ಫ್) ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಇಂದ್ರಜಿತ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಪ್ರಕಟಿಸಿದೆ.
ಶಾಲೆಯ ಸಮವಸ್ತ್ರ ನಿಯಮವು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಅನ್ವಯವಾಗುತ್ತಿದ್ದರೆ, ಅದನ್ನು ಪಾಲಿಸುವಂತೆ ಶಾಲಾ ಆಡಳಿತ ಸೂಚಿಸುವ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಇಂದರ್ಜಿತ್ ಶುಕ್ಲಾ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಅರ್ಜಿದಾರ ವಿದ್ಯಾರ್ಥಿನಿ ಅದೇ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸಿದ್ದು, 11ನೇ ತರಗತಿಗೆ ಪ್ರವೇಶ ಪಡೆಯಲು ಮುಂದಾಗಿದ್ದಳು. 6ನೇ ತರಗತಿಯಿಂದಲೇ ಶಾಲಾ ಸಮವಸ್ತ್ರದ ಮೇಲೆ ಸ್ಕಾರ್ಫ್ ಧರಿಸುತ್ತಿದ್ದರೂ, ಈ ಹಿಂದೆ ಶಾಲಾ ಆಡಳಿತ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ಆಕೆ ವಾದಿಸಿದ್ದಳು. ಇದಕ್ಕೆ ಪೂರಕವಾಗಿ 8, 9 ಮತ್ತು 10ನೇ ತರಗತಿಯ ಗುರುತಿನ ಚೀಟಿಗಳು ಹಾಗೂ ಗುಂಪು ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಳು.
ಆದರೆ 11ನೇ ತರಗತಿ ಪ್ರವೇಶದ ವೇಳೆ ಶಾಲಾ ಆಡಳಿತವು ಸ್ಕಾರ್ಫ್ ಧರಿಸುವುದು ಸಮವಸ್ತ್ರ ನಿಯಮಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿ ಪ್ರವೇಶ ನಿರಾಕರಿಸಿತ್ತು.
ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಾದ
ವಿದ್ಯಾರ್ಥಿನಿಯ ಪರ ವಕೀಲರು, ಸ್ಕಾರ್ಫ್ ಧರಿಸುವುದು ಸಂವಿಧಾನದ 19(1)(a) ವಿಧಿಯಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ವಾದಿಸಿದರು. ಇದು ವಿದ್ಯಾರ್ಥಿನಿಯ ಘನತೆ, ವೈಯಕ್ತಿಕ ಸ್ವಾಯತ್ತತೆ ಹಾಗೂ ಧಾರ್ಮಿಕ ಆಚರಣೆಯೊಂದಿಗೆ ಸಂಬಂಧಿಸಿದೆ. ಸ್ಕಾರ್ಫ್ ಧರಿಸುವುದನ್ನು ತಡೆಯುವುದು ಸಂವಿಧಾನದ 14 ಮತ್ತು 19(1)(a) ವಿಧಿಗಳಡಿ ದೊರೆಯುವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಾದಿಸಲಾಯಿತು.
ಶಾಲೆಯ ಸಮವಸ್ತ್ರ ನಿಯಮಕ್ಕೆ ಹೈಕೋರ್ಟ್ ಬೆಂಬಲ
ರಾಜ್ಯ ಸರ್ಕಾರ ಹಾಗೂ ಸಿಬಿಎಸ್‌ಇ ಪರ ವಕೀಲರು, ಇದು ಖಾಸಗಿ ಅನುದಾನರಹಿತ ಶಾಲೆಯಾಗಿದ್ದು, ಶಾಲಾ ಆಡಳಿತವೇ ಸಮವಸ್ತ್ರದ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದೆ ಎಂದು ತಿಳಿಸಿದರು. ಎಲ್ಲಾ ಧರ್ಮಗಳ ವಿದ್ಯಾರ್ಥಿಗಳು ಒಂದೇ ಸಮವಸ್ತ್ರದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಶಿಸ್ತು ಹಾಗೂ ಸಮಾನತೆ ಕಾಪಾಡಲು ಈ ನಿಯಮ ಅಗತ್ಯವಾಗಿದೆ ಎಂದು ವಾದಿಸಿದರು.
ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಸಮವಸ್ತ್ರ ನಿಯಮವು ಏಕರೂಪವಾಗಿದ್ದು, ಸದುದ್ದೇಶದಿಂದ ರೂಪಿಸಲ್ಪಟ್ಟಿದ್ದು, ತಾರತಮ್ಯವಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತಿದ್ದು, ಶಿಸ್ತು ಮತ್ತು ಸಂಸ್ಥೆಯ ಗುರುತನ್ನು ಕಾಪಾಡುವ ಉದ್ದೇಶ ಹೊಂದಿದ್ದರೆ, ಅದರ ನಿರ್ಧಾರವು ಮುಖ್ಯವಾಗಿ ಶಾಲಾ ಆಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ.
ಹಿಂದಿನ ತರಗತಿಗಳಲ್ಲಿ ಸ್ಕಾರ್ಫ್ ಧರಿಸಲು ಆಕ್ಷೇಪ ವ್ಯಕ್ತಪಡಿಸದಿದ್ದ ಮಾತ್ರಕ್ಕೆ ಮುಂದೆ ಕೂಡ ಅದನ್ನು ಧರಿಸುವ ಹಕ್ಕು ವಿದ್ಯಾರ್ಥಿನಿಗೆ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಿಂದಿನ ಆಕ್ಷೇಪರಹಿತ ನಡೆ ನಿರ್ಲಕ್ಷ್ಯ, ಸಡಿಲಿಕೆ ಅಥವಾ ಸೌಜನ್ಯದ ಕಾರಣದಿಂದಲೂ ಆಗಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
‘ಅತ್ಯಗತ್ಯ ಧಾರ್ಮಿಕ ಆಚರಣೆ’ ಎಂಬುದಕ್ಕೆ ಪುರಾವೆ ಇಲ್ಲ
ಸ್ಕಾರ್ಫ್ ಧರಿಸುವುದು ತನ್ನ ಧರ್ಮದ ಅತ್ಯಗತ್ಯ ಆಚರಣೆ ಎಂದು ವಿದ್ಯಾರ್ಥಿನಿ ಹೇಳಿದ್ದರೂ, ಅದನ್ನು ಸಾಬೀತುಪಡಿಸುವ ಧಾರ್ಮಿಕ ಗ್ರಂಥಗಳು ಅಥವಾ ಇತರ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೈಕೋರ್ಟ್ ಗಮನಿಸಿದೆ. ಅದೇ ಧರ್ಮಕ್ಕೆ ಸೇರಿದ ಇತರ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸದಿರುವುದು ಛಾಯಾಚಿತ್ರಗಳಲ್ಲಿ ಕಂಡುಬಂದಿದೆ ಎಂಬುದನ್ನೂ ನ್ಯಾಯಾಲಯ ಉಲ್ಲೇಖಿಸಿದೆ.
ಶಾಲೆಯು ವಿದ್ಯಾರ್ಥಿನಿಯ ಧಾರ್ಮಿಕ ನಂಬಿಕೆಯನ್ನು ತಡೆಯುತ್ತಿಲ್ಲ. ಬದಲಾಗಿ ಸಂಸ್ಥೆಯ ಶಿಸ್ತಿನ ಭಾಗವಾಗಿರುವ ಸಮವಸ್ತ್ರವನ್ನು ಪಾಲಿಸುವಂತೆ ಸೂಚಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
‘ಯೂನಿಫಾರ್ಮ್’ ಎಂದರೆ ಎಲ್ಲರಿಗೂ ಒಂದೇ ನಿಯಮ
ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಇಚ್ಛೆಯಂತೆ ಸಮವಸ್ತ್ರದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದರೆ, ‘ಯೂನಿಫಾರ್ಮ್’ ಎಂಬ ಪರಿಕಲ್ಪನೆಯೇ ಅರ್ಥ ಕಳೆದುಕೊಳ್ಳುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಶಾಲಾ ಸಮವಸ್ತ್ರವು ಶಿಸ್ತು, ಮಕ್ಕಳ ನಡುವಿನ ಸಮಾನತೆ, ಶಿಕ್ಷಣ ಸಂಸ್ಥೆಯ ಗುರುತು ಮತ್ತು ಜಾತ್ಯತೀತ ವಾತಾವರಣವನ್ನು ಉತ್ತೇಜಿಸುತ್ತದೆ. ಹೀಗಾಗಿ, ಸಮವಸ್ತ್ರದ ನಿಯಮದಲ್ಲಿ ಬದಲಾವಣೆ ಬಯಸುವವರು ತಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕು, ನಿಯಮವನ್ನು ಅಲ್ಲ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.
ಈ ಮೂಲಕ ಶಾಲೆಯ ಸಮವಸ್ತ್ರ ನೀತಿಯನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.













