ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಸುಮಲತಾ ಸ್ಪರ್ಧೆ ಗೊಂದಲದಲ್ಲಿದೆ. ಕಾಂಗ್ರೆಸ್ ಸೇರಬಹುದಾ ಎಂಬ ಪ್ರಶ್ನೆಗಳು ಎದ್ದಿದ್ದು, ಈ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಉತ್ತರಿಸಿದ್ದಾರೆ. ಈಗ ಸುಮಲತಾ ನಮ್ಮ ಜೊತೆಗೆ ಇಲ್ಲ ಬಿಜೆಪಿ ಜೊತೆಯಲ್ಲಿ ಇದ್ದಾರೆ.ಆ ಬಗ್ಗೆ ಮೊದಲೇ ನಾನ್ಯಾಕೆ ಮಾತನಾಡಲಿ ಎಂದಿದ್ದಾರೆ.
ಇನ್ನು ಲೋಕಸಭೆಯಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಚಲುವರಾಯಸ್ವಾಮಿ ಅವರೇ ಕಣಕ್ಕೆ ಇಳಿಯುತ್ತಾರೆ ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ, ಯಾವ ಚರ್ಚೆಯೂ ಇಲ್ಲ. ಇಲ್ಲಿಗೆ ಇದನ್ನ ಬಿಡಿ. ಮತ್ತೆ ಕೇಳಬೇಡಿ, ಮತ್ತೆ ಬರೆಯಬೇಡಿ. ಸುಮ್ಮನೆ ಬರೆದು ಯಾಕೆ ವೇಸ್ಟ್ ಮಾಡಿಕೊಳ್ಳುತ್ತೀರಿ. ನಾನು ಅಭ್ಯರ್ಥಿ ಆಗುವಂತ ಪ್ರಪೋಸಲ್ ನಮ್ಮ ಹೈಕಮಾಂಡ್ ಕೊಟ್ಟಿಲ್ಲ. ನಮ್ಮ ಮುಖ್ಯಮಂತ್ರಿಗಳು ಕೂಡ ಯಾವುದೇ ಸೂಚನೆಯನ್ನು ನೀಡಿಲ್ಲ. ನಮಗೆ ಒಂದು ಜವಬ್ದಾರಿ ನೀಡಿದ್ದಾರೆ. ಸೂಕ್ತವಾದ ಅಭ್ಯರ್ಥಿ ನೋಡುವುದಕ್ಕೆ ಹೇಳಿದ್ದಾರೆ. ಅದರಂತೆ ನಾವೂ ಮತ್ತು ನಮ್ಮ ಶಾಸಕರೆಲ್ಲ ಸೇರಿ ಅಭ್ಯರ್ಥಿಯನ್ನ ಸಿದ್ಧ ಮಾಡಿದ್ದೇವೆ. ನನ್ನ ಕುಟುಂಬದಲ್ಲಿ ಆಗಲಿ, ನಾನಾಗಲೀ ಆ ಆಕಾಂಕ್ಷೆಯಿಂದ ಇಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿ ಎಂಎಲ್ಎ ಗಳಿಗೆ ಅಸಮಾಧಾನವಿದೆ. ಅಶೋಕ್ ವಿಪಕ್ಷ ನಾಯಕನಾದ ಮೇಲೆ, ವಿಜಯೇಂದ್ರ ಅಧ್ಯಜ್ಷರಾದ ಮೇಲೆ ಎಷ್ಟು ಜನ ಮಾತನಾಡುತ್ತಾ ಇದ್ದಾರೆ. ಎಷ್ಟು ಜನ ವಿಶ್ವಾಸವನ್ನ ವ್ಯಕ್ತಪಡಿಸಿಲ್ಲ. ಅವರೆಲ್ಲಾ ಪಕ್ಷ ಬಿಡುತ್ತಾರೋ ಅಥವಾ ಪಕ್ಷದಲ್ಲಿ ಆಕ್ಟೀವ್ ಆಗಿರುತ್ತಾರೋ ಅನ್ನುವುದು ಒಂದು ಕಡೆ. ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಬಳಿಕ ಬಹಳಷ್ಟು ಜನಕ್ಕೆ ಸಮಾಧಾನವಿಲ್ಲ. ಅವರನ್ನೆಲ್ಲ ಕಟ್ಟಿ ಹಾಕಬೇಕಲ್ವಾ. ಅದಕ್ಕೆ ಹೇ ದಡ್ಡರಾ ನೀವು ಎಲ್ಲೂ ಹೋಗಬೇಡಿ ನಾವೇ ಸರ್ಕಾರ ಮಾಡುತ್ತೀವಿ ಅಂತಾರೆ. ಅಲ್ಲ ರೀ 110 ಇರೋರು 113 ಮಾಡಿಕೊಂಡು ಐದು ವರ್ಷ ಆಡಳಿತ ಮಾಡುತ್ತೀವಿ ಅಂದರೆ 135 ಇರೋ ನಾವೂ ಕಿವಿಗೆ ಹೂವ ಇಟ್ಟುಕೊಂಡಿದ್ದೀವಾ ಎಂದು ಟಾಂಗ್ ಕೊಟ್ಟಿದ್ದಾರೆ.