ಕಲಬುರಗಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳು ಪ್ರಚಾರ ಕಾರ್ಯದ ಜೊತೆಗೆ ತಮ್ಮ ಪ್ರಣಾಳಿಕೆಯ ಮೂಲಕ ಜನರನ್ನು ಸೆಲೆಯುವ ಪ್ರಯತ್ನ ನಡೆಸುತ್ತಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ವಿದ್ಯತ್ ಫ್ರೀ ಹಾಗೂ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುತ್ತೇವೆ ಎಂದು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ.
ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಕಲಬುರಗಿಯಲ್ಲಿ ಸಾಗಿದ್ದು, ಅಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತ ಹಾಗೂ ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿಯನ್ನು ನೀಡುತ್ತೇವೆ. ಪ್ರಾಣ ಹೋದರೂ ಈ ಎರಡು ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ 40% ದಂಧೆ ನಡೆಯುತ್ತಿದೆ. ಶಾಸಕರಿಗೆ 4% ಸಂಸದರಿಗೆ 40% ಉಳಿದವರಿಗೆ 20% ಮಾತ್ರ ಸಿಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಕ್ಕೆ ಸಾಧ್ಯವಿದೆಯಾ..? ಕಮಿಷನ್ ಸರ್ಕಾರದಲ್ಲಿ ಆಲಿಬಾಬಾ ಚಾಲಿಸ್ ಚೋರ್ ಇದ್ದಾರೆ. ಇಂಥಹ ಲೂಟಿ ಹೊಡೆಯುವ ಸರ್ಕಾರವನ್ನು ನಾವೂ ದೂರವಿಡಬೇಕಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.