ಬೆಂಗಳೂರು: ಬಿಹಾರ ಚುನಾವಣೆಯ ಬಗ್ಗೆ ಕರ್ನಾಟಕ ರಾಜ್ಯದಲ್ಲಿ ಜೋರು ಚರ್ಚೆಯಾಗುತ್ತಿದೆ. ಬಿಹಾರ ಎಲೆಕ್ಷನ್ ಗೆ ರಾಜ್ಯದಿಂದ ಹಣ ಸಾಗಾಟ ಆಗ್ತಿದೆ ಎಂಬ ಆರೋಪವನ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದರ ಮಧ್ಯೆ ಶ್ರೀರಾಮುಲು ಅವರು , ಬಿಹಾರ ಚುನಾವಣೆಗೆ ಸಿಎಂ ಹಾಗೂ ಡಿಸಿಎಂ ಕಡೆಯಿಂದ 300 ಕೋಟಿ ದೇಣಿಗೆ ಹೋಗಿದೆ ಎಂದಿದ್ದರು.
ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಅಂತ ದೇಣಿಗೆ ನೀಡಿದ್ದರು. ನಾವೂ ಅದನ್ನೇ ಬಿಹಾರ ಚುನಾವಣೆಗಾಗಿ ನೀಡಿದ್ದೇವೆ ಎಂದು ಶ್ರೀರಾಮುಲು ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ರಾಹುಲ್ ಗಾಂಧಿ ಬರ್ತಾ ಇರುವ ಕಾರ್ಯಕ್ರಮದ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿ ಅವರು ಇದೇ ತಿಂಗಳು 29 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಕಚೇರಿ ಶಂಕು ಸ್ಥಾಪನೆಗೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ನಾನು ಮನವಿ ಸಲ್ಲಿಸಿದ್ದೇನೆ. ಕಚೇರಿ ನಿರ್ಮಾಣ ವಿಚಾರದಲ್ಲಿ ಸಚಿವರು, ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಯಾರ್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಲ್ಲ ಎಂದು ವರದಿ ನೀಡುವಂತೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಾನು ಕೂಡ ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಕಳುಹಿಸಬೇಕು. ಆನಂತರ ಅವರು ದಿನಾಂಕ ನಿಗದಿ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಬರುವಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿದ್ದು, ಆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.






