ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಆ.14): ಧಾರ್ಮಿಕತೆ ಜೊತೆ ವೈಚಾರಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ರಚನಾತ್ಮಕವಾದ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಹಾಗೂ ಭಾರತೀಯ ಸುನ್ನಿ ಸೂಫಿ ಸಂತರ ಮಹಾವೇದಿಕೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಧಾಯಕತೆ ಜೊತೆಯಲ್ಲಿ ವೈಚಾರಿಕತೆಯನ್ನು ಪ್ರತಿಪಾದಿಸುವವರ ಮಾತನ್ನು ಜನ ಆಲಿಸುತ್ತಾರೆ. ಭಾಷಣ ಮಾಡುವವರ ನಡುವೆ ಸತ್ಕಾರ್ಯ ಸಮಾಜಮುಖಿ ಕೆಲಸ ಮಾಡುವವರು ಬೇಕಾಗಿದ್ದಾರೆ. ವ್ಯಕ್ತಿ ದೊಡ್ಡವನಾಗುವುದು ತನ್ನ ವ್ಯಕ್ತಿತ್ವ, ಮಾನವೀಯತೆಯಿಂದ. ಸಾಮಾನ್ಯ ವ್ಯಕ್ತಿ ಬದುಕಿನಲ್ಲಿ ಸಮರ್ಥ ವ್ಯಕ್ತಿಯಾದಾಗ ಜೀವನ ಸಾರ್ಥಕವೆನಿಸುತ್ತದೆ ಎಂದು ತಿಳಿಸಿದರು.
ಕುರಾನ್ ಜಗತ್ತಿಗೆ ಉತ್ತಮವಾದ ಸಂದೇಶಗಳನ್ನು ನೀಡಿದೆ. ಪ್ರತಿಯೊಬ್ಬರು ಬದುಕು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದನ್ನು ಹೇಳುತ್ತದೆ. ವಿಚಾರವಂತರು, ವೈಚಾರಿಕರ ಬದುಕಿಗೆ ಪ್ರಾಯೋಗಿಕವನ್ನು ಕೊಟ್ಟವರು ಬಸವಣ್ಣ, ಮಹಮದ್ ಪೈಗಂಬರ್. ಹಾಗಾಗಿ ಅವರ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಿದೆ ಎಂದರು.
ಖ್ಯಾತ ಪ್ರವಚನಕಾರ ಮಂಗಳೂರಿನ ಕುಂಞ ಮಾತನಾಡುತ್ತ ಇಸ್ಲಾಂ ಧರ್ಮ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿದೆ. ಹೆಣ್ಣಾಗಲಿ, ಗಂಡಾಗಲಿ ತಾರತಮ್ಯವಿಲ್ಲದೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಯಾವುದೇ ಒಂದು ಸಮುದಾಯ ಅಭಿವೃದ್ದಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಪಡೆಯುವ ಮಾರ್ಗದಲ್ಲಿ ಯಾರು ಪ್ರವೇಶಿಸುತ್ತಾರೋ ಅಂತಹವರು ದೇವರ ಮಾರ್ಗದಲ್ಲಿರುತ್ತಾರೆಂದು ಪ್ರವಾದಿ ಮಹಮದ್ ಪೈಗಂಬರ್ ಸಾರಿದ್ದಾರೆ. ಶಿಕ್ಷಣದ ಜೊತೆ ಬುದ್ದಿ, ಚಿಂತನೆ, ಆಲೋಚನೆ, ಅರಿವು ತುಂಬಾ ಮುಖ್ಯವಾಗಿರಬೇಕು ಎಂದು ಹೇಳಿದರು.
ನಿಮ್ಮಲ್ಲಿರುವ ದೊಡ್ಡ ದೊಡ್ಡ ಕನಸುಗಳು ಸಾಕಾರಗೊಳ್ಳಬೇಕಾದರೆ ಮೊದಲು ಶಿಕ್ಷಣದ ಕಡೆ ಗಮನ ಕೊಡಬೇಕು. ವಿದ್ಯಾರ್ಥಿ ಜೀವನದಲ್ಲಿ ನೀವು ಯಾವ ಗುರಿಯತ್ತ ತಲುಪಬೇಕು ಎನ್ನುವ ಸ್ಪಷ್ಟ ಅರಿವಿರಬೇಕು. ಹಣ ಗಳಿಸುವುದಕ್ಕಾಗಿ ಶಿಕ್ಷಣ ಎನ್ನುವುದಕ್ಕಿಂತ ಸಮುದಾಯದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾವಂತರಾಗಬೇಕೆಂದು ಮುಸ್ಲಿಂ ಸಮುದಾಯದ ಮಕ್ಕಳಿಗೆ ಕರೆ ನೀಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎನ್ನುವುದು ಪೋಷಕರುಗಳಿಗೆ ನಿಜವಾಗಿಯೂ ಆರ್ಥಿಕ ಹೊರೆಯಾಗಿದೆ. ಪ್ರತಿಭಾವಂತರು ಸಾಕಷ್ಟಿದ್ದಾರೆ. ಆದರೆ ಬಡತನ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ.
ಪ್ರಜ್ಞಾವಂತರನ್ನು ಗುರುತಿಸುವ ಕೆಲಸವಾಗಬೇಕು. ಮನೆಯಲ್ಲಿ ಒಳ್ಳೆಯ ವಾತಾವರಣವಿದ್ದರೆ ಜೀವನದಲ್ಲಿ ಮಕ್ಕಳು ಏನನ್ನಾದರೂ ಸಾಧನೆ ಮಾಡಬಹುದು. ಮಕ್ಕಳ ಸಮಸ್ಯೆಗಳನ್ನು ದೊಡ್ಡವರು ಕೇಳಿ ಪ್ರೋತ್ಸಾಹಿಸಿದಾಗ ಮಾತ್ರ ನಿಜವಾದ ಪ್ರತಿಭೆಯನ್ನು ಹೊರತರಬಹುದು. ಶಿಕ್ಷಣವಷ್ಟೆ ಮುಖ್ಯವಲ್ಲ. ಜಾತಿ, ಧರ್ಮ ಎನ್ನುವುದಕ್ಕಿಂತ ಮನುಷ್ಯರನ್ನು ಪ್ರೀತಿಸುವ ಪಾಠವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಹೇಳಿಕೊಡಬೇಕು. ಹಗೆತನ, ದ್ವೇಷದಿಂದ ಯಾರನ್ನು ಗೆಲ್ಲಲು ಆಗುವುದಿಲ್ಲ. ಪ್ರೀತಿ, ಸಹಭಾಳ್ವೆ, ಸಹೋದರತ್ವಕ್ಕಿಂತ ದೊಡ್ಡ ಮಾನವೀಯತೆ ಬೇರೊಂದಿಲ್ಲ ಎಂದು ತಿಳಿಸಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಸೂಫಿ ಸೈಯದ್ ಮಹಮದ್ ಮಕ್ಸೂದ್ ಖಲೀಲ್ ಷಾ ಖಾದ್ರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಎಸ್.ಡಿ.ಪಿ.ಐ.ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್, ಭಾರತೀಯ ಸುನ್ನಿ ಸೂಫಿ ಸಂತರ ಮಹಾವೇದಿಕೆ ಅಧ್ಯಕ್ಷ ಪಿ.ಸುಭಾನ್‍ವುಲ್ಲಾ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಪಟೇಲ್ ಬಾಬ್‍ಜಾನ್, ಜೆ.ಕೆ.ಟಿಂಬರ್ ಡಿಪೋದ ಎ.ಸಾಧಿಕ್‍ವುಲ್ಲಾ ವೇದಿಕೆಯಲ್ಲಿದ್ದರು.
ಗಂಗಾಧರಪ್ಪ ಮತ್ತು ತಂಡದವರು ಪ್ರಾರ್ಥಿಸಿದರು. ಟಿ.ಶಫಿವುಲ್ಲಾ ಸ್ವಾಗತಿಸಿದರು.
ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಪ್ರತಿಭಾವಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.