ಬೆಂಗಳೂರು: ಪಿಎಸ್ಐ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಬಂಧಿಸಿದ್ದಾರೆ. ಆದರೆ ಈ ಮಧ್ಯೆ ಕಷ್ಟಪಟ್ಟು ಓದಿ ಬರೆದ ವಿದ್ಯಾರ್ಥಿಗಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಇಷ್ಟು ವರ್ಷದ ಶ್ರಮ, ನಮ್ಮ ಮುಂದಿನ ಭವಿಷ್ಯ ಹಾಳಾಯ್ತು ಎಂದು ಗೋಳಾಡುತ್ತಿದ್ದಾರೆ. ಇದೀಗ ಒಂದೆಜ್ಜೆ ಮುಂದೆ ಹೋಗಿರುವ ನೊಂದ ಅಭ್ಯರ್ಥಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಮೋದಿಯವರ ಬಗ್ಗೆ ನಮಗೆ ಅಪಾರ ಗೌರವವಿದೆ. ಕೆಲಸ ನಾಡಿ ನ್ಯಾಯ ಕೊಡಿಸುತ್ತಾರೆ ಎಂದು ನಂಬಿದ್ದೇವೆ. ಒಂದು ವೇಳೆ ನ್ಯಾಯ ಕೊಡಿಸದೆ ಹೋದರೆ ನಾವೂ ಮುಂದೆ ಟೆರರಿಸ್ಟ್ ಗಳ ಜೊತೆ ಕೈಜೋಡಿಸುತ್ತೇವೆ. ಕರ್ನಾಟಕ ಸರ್ಕಾರದ ಹುದ್ದೆಗಳು ಹಣ ಇದ್ದವರಿಗೆ ಎಂಬಂತಾಗಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವೂ ಮಾನಸಿಕವಾಗಿ ಸತ್ತು ಹೋಗಿದ್ದೇವೆ.
ಇನ್ನು ಮುಂದೆ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವುದಿಲ್ಲ. ಟೆರರಿಸ್ಟ್ ಗಳು, ನಕ್ಸಲರ ಜೊತೆ ಸೇರಲು ಇಚ್ಛಿಸುತ್ತೇವೆ. ಅವರ ಜೊತೆ ಸೇರಿ, ಹಣ ಪಡೆದು ಬಡ ಕುಟುಂಬಕ್ಕೆ ಸಹಾಯ ಮಾಡಲಿದ್ದೇವೆ. ಪಿಎಸ್ಐ ಪರೀಕ್ಷೆಯಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗಬೇಕು. 2021ರಲ್ಲಿ ನಡೆದ ಎಪ್ಡಿಎ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಅದು ಕೂಡ ತನಿಖೆಯಾಗಬೇಕು. ನಾವೂ ಎಂಟು ಜನ ಇದ್ದೇವೆ. ತೀರ್ಮಾನ ಮಾಡಿಯಾಗಿದೆ ಎಂದು ಪ್ರಧಾನಿ ಮೋದಿ ಅವರಿಗೆ ರಕ್ತದದಲ್ಲಿ ಪತ್ರ ಬರೆದಿದ್ದಾರೆ.