ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಹೋರಾಟಗಳು ನಡೆಯುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಂಬಂಧ ಸಭೆ ಕೂಡ ನಡೆಸಲಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಯತ್ನಾಳ್ ಕೂಡ ಭಾಗಿಯಾಗಲಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿ ಕಾಲ್ನಡಿಗೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿರುವ ಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಎಂಬುದು ಕಳೆದ ಮೂವತ್ತು ವರ್ಷದಿಂದ ನಮ್ಮ ಹಕ್ಕೊತ್ತಾಯ. ಮೂರು ವರ್ಷದಿಂದ ಇದಕ್ಕಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಜನಾಂಗದವರು ಮನೆ, ಮಠ ಬಿಟ್ಟು ಹೋರಾಟ ಮಾಡಿದ್ದೇವೆ. ನಮಗೆ ಸಿಗಬೇಕಾದ ಮೀಸಲಾತಿ ಸ್ಪಷ್ಟತೆ ಇನ್ನು ಕೂಡ ಸಿಕ್ಕಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕೊನೆ ಗಳಿಗೆಯಲ್ಲಿ 2D ಎಂಬ ಪ್ರವರ್ಗ ಸೃಷ್ಟಿ ಮಾಡಿತ್ತು. ಆದರೆ ಅದು ಇಂಪ್ಲಿಮೆಂಟ್ ಆಗಿರಲಿಲ್ಲ. ಈಗಿನ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡ್ತೀವಿ, ನಮ್ಮ ಹೋರಾಟದ ಪರಿಣಾಮ ಇಂದು ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ಸಮಾಜದ ಋಣ ನಿಮ್ಮ ಮೇಲಿದೆ. ಬೇರೆ ಬೇರೆ ಸಮುದಾಯದವರು ವೋಟ್ ಹಾಕಿರಬಹುದು. ಆದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೆಗೆದುಕೊಂಡ ನಿರ್ಧಾರ ತಡವಾಗಿದ್ದಕ್ಕೆ ನಮ್ಮ ಜನ ನೀವೂ ಮಾಡ್ತೀರ ಎಂಬ ಕಾರಣಕ್ಕೆ ಆಶೀರ್ವಾದ ಮಾಡಿದ್ದಾರೆ.
ನಿಮ್ಮ ಸರ್ಕಾರ ರಚನೆಯಾಗಿ ಒಂದು ವರ್ಷ ಎಂಟು ತಿಂಗಳಾಗಿದೆ. ಇಲ್ಲಿವರೆಗೂ ಒಂದು ಸಭೆ ಮಾಡಿಲ್ಲ. ಸಭೆ ಮಾಡ್ತೀವಿ ಅಂತ ಹೇಳಿ ಎರಡು ಬಾರೀ ಮಾತು ಕೊಟ್ಟಿದ್ರಿ. ಈಗ ಸಿಎಂ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ನಾವೂ ಬೇರೆ ಏನು ಕೇಳುವುದಕ್ಕೆ ಹೋಗಲ್ಲ. ನಮ್ಮ ವರದಿ ನಿಮ್ಮ ಕೈಲಿದೆ. ನಮ್ಮ ಸಮುದಾಯದವರಿಗೆ 2A ಮೀಸಲಾತಿಗೆ ಸೇರಿಸಬೇಕು. ಎಲ್ಲಾ ಲಿಂಗಾಯತರನ್ನು ಸಹ ಒಬಿಸಿಗೆ ಶಿಫಾರಸು ಮಾಡಬೇಕು ಎಂಬ ಎರಡು ಬೇಡಿಕೆ ಇದಾವೆ ಎಂದಿದ್ದಾರೆ.