ಮೈಸೂರು: ಪಾಂಡವಪುರ ತಾಲೂಕಿನ ಬೇಬಿಬೆಟ್ಟ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಅಲ್ಲಿನ ಟ್ರಯಲ್ ಬ್ಲಾಸ್ಟ್ ಮಾಡಲು ಯೋಜನೆ ನಡೆಯುತ್ತಿದೆ. ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾ ದೇವಿ ಎಂಟ್ರಿಯಾಗಿದ್ದು, ಸುದ್ದಿಗೋಷ್ಟಿ ನಡೆಸಿ, ಬೇಸರ ಹೊರ ಹಾಕಿದ್ದಾರೆ.
ಬೇಬಿ ಬೆಟ್ಟದ 1,600 ಎಕರೆ ಪ್ರದೇಶ ರಾಜಮನೆತನಕ್ಕೆ ಸೇರಿದ್ದಾಗಿದೆ. ಆ ಜಾಗದಲ್ಲಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಬಾರದು. ಬ್ಲಾಸ್ಟ್ ಆದರೆ ಕೃಷ್ಣಸಾಗರ ಅಣೆಕಟ್ಟೆಗೆ ಅಪಾಯವಿದೆ. ನಮಗೆ ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ. ರಾಜ್ಯ ವಿಲೀನದ ಸಂದರ್ಭದಲ್ಲಿ ರಾಜ ವಂಶ ಮತ್ತು ಸರ್ಕಾರದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜಮನೆತನಕ್ಕೆ ಒಂದಷ್ಟು ಆಸ್ತಿಯನ್ನು ಬಿಟ್ಟು ಇನ್ನುಳಿದ ಆಸ್ತಿಯನ್ನು ದೇಶದೊಂದಿಗೆ ವಿಲೀನ ಮಾಡಲಾಗಿತ್ತು.
ಹೀಗಾಗಿ ಯಾವುದು ನಮ್ಮ ಆಸ್ತಿ, ಯಾವುದು ಸರ್ಕಾರದ ಆಸ್ತಿ ಎಂಬುದು ಅಧಿಕಾರ ನಡೆಸುವವರಿಗೆ ಗೊತ್ತಿದೆ. ಬೇಬಿ ಬೆಟ್ಟದ ಸುತ್ತಮುತ್ತಲಿನ 1623 ಎಕರೆ ನಮ್ಮ ಖಾಸಗಿ ಆಸ್ತಿ. ಅದನ್ನು ಸರ್ಕಾರ ಬಿ ಕರಾಬು ಎಂದೇ ಘೋಷಣೆ ಮಾಡಿದೆ. ಅದರ ಪರಿಣಾಮವಾಗಿಯೇ ಅಲ್ಲಿ ಗಣಿಗಾರಿಕೆ ಆರಂಭವಾಯಿತು. ಈಗ ಟ್ರಯಲ್ ಬ್ಲಾಸ್ಟ್ ನಡೆಸಲು ಹೊರಟಿದ್ದಾರೆ. ಕನಿಷ್ಠ ಪಕ್ಷ ಅನುಮತಿಯನ್ನಾದರೂ ಪಡೆಯಬೇಕು. ಎಲ್ಲವೂ ಗೊತ್ತಿದ್ದರು ಬೇಕಂತಲೇ ಮಾಡುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.