ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್ ಕೂಡ ಹೆಜ್ಜೆ ಹಾಕಿದ್ದು, ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷದಿಂದ ಜನ ಸಂಕಲ್ಪ ಮಾಡಿರಲಿಲ್ಲ, ಈಗ ಜನ ಸಂಕಲ್ಪ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಸಂಕಲ್ಪಯಾತ್ರೆ ಕುರಿತು ಟೀಕಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ರಾಯಚೂರು ಬಿಜೆಪಿ ಸಮಾವೇಶ ಕುರಿತು ಮಾತನಾಡಿರುವ ಅವರು ಅಧಿಕಾರ ಇದ್ದಾಗ ಸ್ಪಂದನ ಮತ್ತು ಸಂಕಲ್ಪ ಮಾಡಬಹುದು. ಬಿಜೆಪಿ ಅವರು ಈಗ ಜನ ಹತ್ತಿರ ಹೋಗಲು ಹೊರಟಿದ್ದಾರೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿಗೆ ವರವಾಗಲಿದೆ ಎನ್ನುತ್ತಿರುವಾಗಲೇ ಈ ಬಗ್ಗೆ ಮಾತನಾಡಿರುವ ಡಿಕೆಶಿ, ಎಸ್ಸಿ ಎಸ್ಟಿ ಮೀಸಲಾತಿ ಮಾಡಬೇಕು ಎಂಬುದಕ್ಕೆ ನಾವೇ ಬೇರು. ನಾಗಮೋಹನ್ ದಾಸ್ ಸಮಿತಿ ರಚನೆ ಕೂಡಾ ನಾವೇ ಮಾಡಿದ್ದು. ಇದು ಇಷ್ಟೋತ್ತಿಗೆ ಪಾರ್ಲಿಮೆಂಟ್ ನಲ್ಲಿ ಅಂಗೀಕಾರ ಆಗಬೇಕಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ಅವರು ಇದನ್ನು ಮಾಡಲು ಹೊರಟಿದ್ದಾರೆ. ಮೀಸಲಾತಿ ವಿರುದ್ದ ನಾವಿಲ್ಲ. ನಾವು ಕೂಡಾ ಪರ ಇದ್ದೇವೆ. ಅದಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ ಎಂದರು.
ಇದೇ 15 ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಕೂಡಾ ನಡೆಯುತ್ತದೆ. ಚುನಾವಣೆ ಇರುವುದರಿಂದ ಯಾತ್ರಿಗಳಿಗೆ ಮತದಾನ ನಡೆಯುತ್ತಿದ್ದು, ಅಲ್ಲೇ ಮತ ಹಾಕಲು ಬೂತ್ ಮಾಡುತ್ತೇವೆ ಎಂದು ಹೇಳಿದರು. AICC ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ & ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆ ಮಾಡಿದ್ದಾರೆ. PCC ಸದಸ್ಯರಾಗಿದ್ದಾರೆ ಅವರು ಬೆಂಗಳೂರಿನ KPCC ಕಚೇರಿಯಲ್ಲಿ ಮತದಾನ ಮಾಡುತ್ತಾರೆ ಎಂದು ಡಿಕೆಶಿ ತಿಳಿಸಿದರು.