ಬೆಂಗಳೂರು: ರಾಜ್ಯದಲ್ಲಿ ಮಳೆಯೇ ಇಲ್ಲ ಆದರೂ ಕಾವೇರಿಯ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದೇ ಪ್ರತಿ ಸಲ ನಿರ್ಧಾರವಾಗುತ್ತಿದೆ. ಹೀಗಾಗಿ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ. ಈ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ನೀರು ಬಿಡುವುದಕ್ಕೆ ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿಯೇ ಮಾತನಾಡಿದ್ದಾರೆ.
ತಮಿಳುನಾಡಿಗೆ ಪ್ರತಿದಿನ 5000 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ. ಆದರೆ ನೀರು ಹರಿಸಿವ ಪರಿಸ್ಥಿತಿಯಲ್ಲಿ ನಾವಿಲ್ಲ. ಹೀಗಾಗಿ ಇದನ್ನು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಲು ಸಿದ್ದರಿದ್ದೇವೆ. ವಸ್ತುಸ್ಥಿತಿ ವಿವರಿಸಿ, ಪ್ರಧಾನಿ ಮೋದಿ ಅವರಿಗೆ ಮತ್ತೆ ಪತ್ರ ಬರೆಯುತ್ತೇನೆ. ಸರ್ವಪಕ್ಷ ನಿಯೋಗದ ಭೇಟಿಗೂ ಪ್ರಧಾನಿ ಮೋದಿ ಅವರು ಈವರೆಗೂ ಸಮಯ ಕೊಟ್ಟಿಲ್ಲ ಎಂದಿದ್ದಾರೆ.
ನೆಲ, ಜಲ, ಭಾಷೆ ವಿಚಾರದಲ್ಲಿ ನಾವ್ಯಾರು ರಾಜಕೀಯ ಮಾಡಿಲ್ಲ. ಎಲ್ಲರೂ ಒಟ್ಟಾಗಿಯೇ ಹೋಗಿದ್ದೇವೆ. ಸೆ.18ರಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದೆ. ಎಲ್ಲಾ ಸಂಸದರು, ಸಚಿವರ ಜೊತೆಗೆ ಹೋಗಿ ಚರ್ಚೆ ಮಾಡುತ್ತೇವೆ. ಸಮಿತಿಯ ಮುಂದೆ ಮತ್ತೊಂದಹ ಅರ್ಜಿ ಹಾಕುತ್ತೇವೆ. ನೀರು ಬಿಡಬೇಕಾ..? ಬೇಡವಾ ಎಂಬುದರ ಬಗ್ಗೆ ಕಾನೂನು ತಜ್ಞರ ಸಲಹೆಗಳನ್ನು ಪಡೆಯುತ್ತೇವೆ. ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಲಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿಯೂ ವಾಸ್ತವಾಂಶ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.