ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. ಈ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಯಾವುದೇ ಟೀಂನಲ್ಲಿ ಇದ್ದರೂ ಕೂಡ ಅಲ್ಪಸಂಖ್ಯಾತರ ಜೊತೆಗೆ ನಿಲ್ಲುತ್ತೇವೆ ಎಂದಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಮೈತ್ರಿ ಆಗುತ್ತಿವೋ ಇಲ್ಲವೋ, ಅದು ಕಾಂಗ್ರೆಸ್ ನವರಿಗೆ ಯಾಕೆ ಬೇಕು..? ಹಿಂದೆ ಬಿಜೆಪಿ ಜೊತೆಗೆ ಸೇರಿ ಸರ್ಕಾರ ಮಾಡಿದ್ದೆವು. ಆಗ ಬಾಬಾ ಬುಡನ್ ಗಿರಿ ವಿಚಾರದಲ್ಲಿ ಕ್ರಮ ಕೈಗೊಳ್ಳಲಿಲ್ವಾ..? ಆಗ ನಾವೂ ಅಲ್ಪಸಂಖ್ಯಾತರ ಪರವಾಗಿ ನಿಲ್ಲಲಿಲ್ವಾ..? ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಪಕ್ಷ ಬೇಕಿತ್ತಾ..? ಕಾಂಗ್ರೆಸ್ ಅವರು ಮೀಸಲಾತಿ ಕೊಟ್ಟರಾ..? ಈಗ ಕಣ್ಣಾ ಮುಚ್ಚಾಲೆ ಆಡ್ತಿಲ್ವಾ ಎಂದಿದ್ದಾರೆ.
ಯಾರ ಜೊತೆಗೆ ಹೋದ್ರೂ ಹಿಂದುಳಿದ ವರ್ಗಕ್ಕೆ ಮೋಸ ಮಾಡಲ್ಲ. ಏನೇ ಆದರೂ ಜಿಲ್ಲೆಯಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಮೋಸ ಆಗಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಎಲ್ಲಾ ರೀತಿಯ ಅನುಕೂಲ ಮಾಡಿದ್ದೇನೆ. ನಾವೂ ಕೋಮುವಾದಿಗಳನ್ನು ದೂರ ಇಟ್ಟಿದ್ದೆವು. ಆದರೆ ಕಾಂಗ್ರೆಸ್ ನಮ್ಮನ್ನೇ ಮುಗಿಸಲು ಹೊರಟಿತ್ತು. ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ್ದೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ.