ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ಅ.12) : ಕೇವಲ ಒಂದು ವರ್ಷದಲ್ಲಿ 56 ಕಿ.ಮೀ. ಪೈಪ್‍ಲೈನ್ ನಕ್ಷೆ ತಯಾರಿಸಿ ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇತಿಹಾಸದಲ್ಲಿಯೇ ಬರೆದಿಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಶ್ರಮಪಟ್ಟಿದ್ದಾರೆ. ಸೂರ್ಯ ಚಂದ್ರ ಇರುವತನಕ ನಾವು ನೀವುಗಳೆಲ್ಲರೂ ಶ್ರೀಗಳನ್ನು ನೆನಪಿಸಿಕೊಂಡು ಊಟ ಮಾಡಬೇಕಾಗಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಸಿರಿಗೆರೆ ಸ್ವಾಮಿಗಳು ಭರಮಸಾಗರ ಕೆರೆ ವೀಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ಶ್ರೀಗಳ ಕಂಚಿನ ಪ್ರತಿಮೆಯನ್ನು ನಿರ್ಮಿಸಲು ಎರಡು ಕೋಟಿ ರೂ.ಗಳನ್ನು ತೆಗೆದಿಟ್ಟಿದ್ದೇನೆ. ಜಲ ಕಲ್ಯಣಾ ಮಾರ್ಗದಿಂದ ಜನ ಕಲ್ಯಾಣದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಭರಮಸಾಗರ ಕೆರೆಗೆ ನೀರು ಹರಿಸುವ ವಿಚಾರ ಕ್ಯಾಬಿನೆಟ್‍ಗೆ ಸೇರಿರಲಿಲ್ಲ. ರಾತ್ರಿ ಹನ್ನೊಂದು ಗಂಟೆಯತನ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳ ಜೊಗೆ ಚರ್ಚಿಸಿ ಬೆಳಿಗ್ಗೆ ಕ್ಯಾಬಿನೆಟ್‍ನಲ್ಲಿ ವಿಷಯ ಚರ್ಚೆಗೆ ಬರುವಂತೆ ಶ್ರಮ ಪಟ್ಟಿದ್ದರ ಫಲವಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಂದೇ ಕಂತಿನಲ್ಲಿ 565 ಕೋಟಿ ರೂ.ಗಳನ್ನು ಮಂಜೂರು ಮಾಡಿದರು.
ಭರಮಸಾಗರ ಕೆರೆಗೆ ನೀರು ಹರಿಯುವುದರಿಂದ ಸುತ್ತಮುತ್ತಲಿನ ಹದಿನೈದು ಕಿ.ಮೀ.ವ್ಯಾಪ್ತಿಯಲ್ಲಿನ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ. ಶರಾವತಿಯಿಂದ ನೇರವಾಗಿ 220 ಮೆ.ವ್ಯಾ. ವಿದ್ಯುತ್ ಪೂರೈಕೆ ಮಾಡಿಕೊಳ್ಳುವುದಕ್ಕಾಗಿ ಅಜ್ಜಪ್ಪನಹಳ್ಳಿ ಸಮೀಪ ಹತ್ತು ಎಕರೆ ಜಮೀನಿನಲ್ಲಿ 220 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುವುದು. ಇದರಿಂದ ರೈತರಿಗೆ ನೀರು ವಿದ್ಯುತ್ ಸರಬರಾಜು ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ಭರಮಸಾಗರದ 40 ಕೆರೆಗಳಿಗೆ ನೀರು ಹಾಗೂ ತಾಳ್ಯ ಹೋಬಳಿಯ ರೈತರಿಗೆ ಅನ್ಯಾಯವಾಗಬಾರದೆಂದು 106 ಕೋಟಿ ರೂ.ಗಳ ಯೋಜನೆ ತಂದಿದ್ದೇನೆ. ಭರಮಸಾಗರ ಕೆರೆಗೆ ನೀರು ಹರಿಯುತ್ತಿರುವುದನ್ನು ನೋಡಿ ರೈತರು ಅಡಿಕೆ ಸಸಿಗಳನ್ನು ಹಚ್ಚುತ್ತಿದ್ದಾರೆ. ವಿದ್ಯುತ್ ಮತ್ತು ನೀರನ್ನು ಸರಾಗವಾಗಿ ನೀಡಿದಾಗ ಮಾತ್ರ ರೈತರ ಬದುಕು ಸುಧಾರಣೆಯಾಗಲಿದೆ. ನೀರಿಗೆ 850 ಕೋಟಿ, ರಸ್ತೆಗೆ 300 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದು, ಒಟ್ಟಾರೆ ಹೊಳಲ್ಕೆರೆ ಕ್ಷೇತ್ರಕ್ಕೆ 1865 ಕೋಟಿ ರೂ.ಗಳನ್ನು ನೀಡಿದ್ದೇನೆ. ಇನ್ನು ಎರಡು ವರ್ಷ ಅಧಿಕಾರವಿರುವುದರಿಂದ ಕ್ಷೇತ್ರದಲ್ಲಿ ಇನ್ನು ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.
ಭರಮಸಾಗರ ಕೆರೆ ವೀಕ್ಷಣೆ ನಂತರ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯ ಡಾ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 29 ನೇ ಶ್ರದ್ದಾಂಜಲಿ ದಿನದಂದೆ ಭರಮಸಾಗರ ಕೆರೆಗೆ ನೀರು ಹರಿದಿದ್ದು ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. ಅನೇಕ ಎಡರು-ತೊಡರುಗಳಿದ್ದವು. ಕೋರ್ಟ್‍ನಲ್ಲಿ ಕೇಸುಗಳಿತ್ತು. ರೈತರನ್ನು ರಾಜಿ ಮಾಡಿಸಿ ಕೆರೆಗೆ ನೀರು ಹರಿಯುವಂತೆ ಮಾಡಲಾಗಿದೆ. ಮೂರು ನೂರು ವರ್ಷಗಳ ಹಿಂದೆ ಒಂದು ಸಾವಿರ ಎಕರೆ ಪ್ರದೇಶವಿರುವ ಕೆರೆಯನ್ನು ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಿಸಿದ್ದು, ರೈತರ ಬಗ್ಗೆ ಅವರಲ್ಲಿ ಎಷ್ಟು ಕಾಳಜಿ ಇತ್ತೆಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
35 ವರ್ಷಗಳ ಕಾಲ ಭರಮಸಾಗರ ಕೆರೆಯನ್ನು ನಿರ್ಮಿಸಲಾಗಿದೆ. 1721 ರಲ್ಲಿ ಈ ಕೆರೆ ರೈತರ ಉಪಯೋಗಕ್ಕೆ ಸಮರ್ಪಿಸಿದ್ದಾರೆ. ಇಟಾಚಿ, ಜೆಸಿಬಿ. ಯಾವುದೂ ಇಲ್ಲದ ಕಾಲದಲ್ಲಿ ಇಂತಹ ಬೃಹತ್ ಕೆರೆ ನಿರ್ಮಿಸಿರುವುದು ಕಡಿಮೆ ಸಾಧನೆಯಲ್ಲ. ಇದೊಂದು ಅಪರೂಪದ ಇತಿಹಾಸ. ಭರಮಸಾಗರ ಏತ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 500 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಸೇರ್ಪಡೆಗೊಳಿಸಿದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ 1200 ಕೋಟಿ ರೂ.ಗಳನ್ನು ಒಂದೆ ಕಂತಿನಲ್ಲಿ ಬಿಡುಗಡೆಗೊಳಿಸಿದ ಪರಿಣಾಮವಾಗಿ ಇಂದು ಭರಮಸಾಗರ ಕೆರೆಗೆ ನೀರು ಹರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ ಎಂದು ಬಣ್ಣಿಸಿದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಜಗಳೂರಿನಲ್ಲಿ ನಡೆದ ಸಿರಿಗೆರೆಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭರಮಸಾಗರ ಕೆರೆಗೆ ನೀರು ಹರಿಸುವ ವಿಚಾರ ಪ್ರಸ್ತಾಪವಾಗಿದ್ದರಿಂದ ಇಂದು ಭರಮಸಾಗರ ಕೆರೆಗೆ ನೀರು ಹರಿದಿದೆ. ಇದರಲ್ಲಿ ಎಲ್ಲರ ಪರಿಶ್ರಮ ಅಡಗಿದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡುತ್ತ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಇಚ್ಚಾಶಕ್ತಿ ಹಾಗೂ ಈ ಭಾಗದ ರೈತರು ಜನಸಾಮಾನ್ಯರ ಮೇಲೆ ತೋರಿದ ಇಚ್ಚಾಶಕ್ತಿಯಿಂದ ಭರಮಸಾಗರ ಕೆರೆ ನೀರು ಕಂಡಿದೆ ಎಂದರು.
ಜಗಳೂರು ಶಾಸಕ ರಾಮಚಂದ್ರಪ್ಪ ಮಾತನಾಡಿದರು.
ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಸರ್ಕಾರಿ ಅಧಿಕಾರಿ ಪ್ರಸನ್ನ, ಶಂಕರನಾರಾಯಣ ಕನ್ಸ್‍ಟ್ರಕ್ಷನ್ ಅಧಿಕಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಬೇಲೂರು ಶಾಸಕ ಲಿಂಗೇಶ್, ಜಗಳೂರು ಮಾಜಿ ಶಾಸಕ ಹೆಚ್.ವಿ.ರಾಜೇಶ್, ಕೆರೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಶಶಿಧರ್, ಜಿ.ಎಸ್.ಅನಿತ್‍ಕುಮಾರ್, ಬಿಜೆಪಿ.ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಡಿ.ವಿ.ಶರಣಪ್ಪ, ಹೆಚ್.ಎನ್.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ, ಜಗದೀಶ್, ಸಾಮಿಲ್ ಶಿವಣ್ಣ, ಮುಖಂಡರಾದ ಇಂದ್ರಪ್ಪ ಸೇರಿದಂತೆ ಇನ್ನ ಅನೇಕರು ವೇದಿಕೆಯಲ್ಲಿದ್ದರು.