Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರೌಂಡ್ ರಿಪೋರ್ಟ್ | ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ರಾತ್ರೋ ರಾತ್ರಿ ವ್ಯರ್ಥವಾಗಿ ಹರಿಯಿತು ಸಾವಿರಾರು ಲೀಟರ್‌ಗಳಷ್ಟು ನೀರು‌ ; ಹೇಳೊರ್ಯಾರು ? ಕೇಳೊರ್ಯಾರು ?

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ ಕುಡಿಯುವ ನೀರಿನ ಅಭಾವ ತಲೆದೂರುತ್ತಿದೆ. ಒಂದು ಕಡೆ ಜನರು ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕ ರಸ್ತೆಯಲ್ಲಿ, ನಲ್ಲಿಗಳಲ್ಲಿ ಮತ್ತು ಪೈಪ್‌ಲೈನ್ ಸೋರಿಕೆಯಿಂದಾಗಿ ಅಮೂಲ್ಯವಾದ ನೀರು ವ್ಯರ್ಥವಾಗಿ ಹರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿರುವುದು ಗಂಭೀರ ಸಮಸ್ಯೆಯಾಗುತ್ತಿದೆ. ರಸ್ತೆ ಬದಿಗಳಲ್ಲಿ ಒಡೆದ ಪೈಪ್‌ಗಳು, ಸರಿಯಾಗಿ ಮುಚ್ಚದ ಟ್ಯಾಪ್‌ಗಳು ಹಾಗೂ ನಿರ್ಲಕ್ಷ್ಯದಿಂದ ನೀರು ದಿನವೂ ಲೀಟರ್‌ಗಳಷ್ಟು ವ್ಯರ್ಥವಾಗುತ್ತಿದೆ.

ಇದಕ್ಕೆ ತಾಜಾ ನಿದರ್ಶನವೆಂಬಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಸೋಮವಾರ ಮಧ್ಯರಾತ್ರಿ ನೀರು ವ್ಯರ್ಥವಾಗಿ ರಸ್ತೆಯಲ್ಲಿ ಹರಿದ ಘಟನೆ ನಡೆದಿದೆ. ಒಂದೆಡೆ ಬೇಸಿಗೆ ನೀರಿನ ಕೊರತೆಯಿಂದ ಜನತೆ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲೇ, ಇಂತಹ ನಿರ್ಲಕ್ಷ್ಯ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಸಿ ರಸ್ತೆಯ ಕೆಳಗೆ ಹಾದುಹೋಗಿರುವ ಪೈಪ್‌ ಲೈನ್ ಒಡೆದು ಹೋಗಿರುವುದರಿಂದ ನೀರು ವ್ಯರ್ಥವಾಗಿ ಹರಿಯುತ್ತಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿ ಸಮೀಪದಲ್ಲಿರುವ ಮನೆಯೊಂದರಲ್ಲಿ ನೀರಿನ ತೊಟ್ಟಿ ತುಂಬಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಈ ನೀರೆಲ್ಲವೂ ನೇರವಾಗಿ ಜಿಲ್ಲಾಧಿಕಾರಿ ನಿವಾಸದೆ ಮುಂದೆ ಹಾದುಹೋಗಿ, ಸಿಇಒ ನಿವಾಸ, ಪಕ್ಕದ ಪೊಲೀಸ್ ಅಧಿಕಾರಿಗಳ ಮುಂದೆ ಹಾದು ಚರಂಡಿ ಸೇರುತ್ತಿದೆ. ಹೀಗೆ
ನೀರು ನಿರಂತರವಾಗಿ ರಸ್ತೆಯ ಮೇಲೆ ಹರಿದು ಹೋಗುತ್ತಿದ್ದು, ದಿನಕ್ಕೆ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದೆ. ನೀರು ವ್ಯರ್ಥವಾಗಿ ಹರಿಯುತ್ತಿರುವುದು ಇದೇ ಮೊದಲೇನಲ್ಲ. ಸಾಕಷ್ಟು ಬಾರಿ ಹೀಗೆ ನೀರು ವ್ಯರ್ಥವಾಗುತ್ತಿದ್ದರೂ ಯಾರೊಬ್ಬರೂ ಸೂಕ್ತ ಕ್ರಮ ಕೈಗೊಳ್ಳದೇ ಮೌನವಾಗಿ ಇರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ವಿಪರ್ಯಾಸವೇ ಸರಿ.

ನೀರು ಹೀಗೆ ವ್ಯರ್ಥವಾಗಿ ಹರಿಯುತ್ತಿರುವುದು ಇಲ್ಲೊಂದೇ ಅಲ್ಲ. ವಿವಿಧ ಬಡಾವಣೆಗಳಲ್ಲಿ ನೀರು ವಿನಾಕಾರಣ ಚರಂಡಿ ಸೇರುತ್ತಲೇ ಇದೆ. ಕೆಲವೆಡೆ ಮನೆಗಳಲ್ಲಿ ತೊಟ್ಟಿ ತುಂಬಿದರೂ ಮುಚ್ಚದೇ ಇರುವ ಕಾರಣ ರಾತ್ರಿಯಿಡೀ ನೀರು ಪೋಲಾಗುತ್ತಲೇ ಇರುತ್ತದೆ. ನೀರು ನಿರಂತರವಾಗಿ ರಸ್ತೆಯ ಮೇಲೆ ಹರಿದು ಹೋಗುತ್ತಿದ್ದು, ದಿನಕ್ಕೆ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದೆ. ಇದರಿಂದ ಒಂದು ಕಡೆ ನೀರಿನ ಸಂಪನ್ಮೂಲ ಹಾಳಾಗುತ್ತಿದ್ದರೆ, ಮತ್ತೊಂದೆಡೆ ರಸ್ತೆ ಪರಿಸ್ಥಿತಿಯೂ ಹದಗೆಡುತ್ತಿದೆ.‌ ಹಲವೆಡೆ ವಾರಗಳ ಕಾಲ ಪೈಪ್‌ಗಳಲ್ಲಿ ಲೀಕೆಜ್ ಇದ್ದರೂ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳದಿರುವುದು ಗಮನಾರ್ಹವಾಗಿದೆ. ಈ ನಿರ್ಲಕ್ಷ್ಯದಿಂದ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಮತ್ತಷ್ಟು ಸಂಕಷ್ಟ ಉಂಟಾಗುತ್ತಿದೆ.

ನೀರು ಹೀಗೆ ರಸ್ತೆಯುದ್ದಲ್ಲೂ ಹರಿದು ವ್ಯರ್ಥವಾಗುತ್ತಿರುವುದು ನೋವಿನ ಸಂಗತಿ. ಹೀಗೆ ನೀರು ವ್ಯರ್ಥವಾಗುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಸಾಕಷ್ಟು ಬಾರಿ ದೂರು ನೀಡಿದರೂ ದುರಸ್ತಿ ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆಯೇ ಹೊರತು ಈ ಸಮಸ್ಯೆ ಮಾತ್ರ ಇಂದಿಗೂ ಬಗೆಹರಿದಿಲ್ಲ. ಇದೊಂದು ಸಾಮಾಜಿಕ ಜವಾಬ್ದಾರಿ. ಇದು ಎಲ್ಲರ ಕರ್ತವ್ಯ. ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಿ ಇಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಆದರೆ ಇಲ್ಲಿ ಯಾರು ಯಾರಿಗೂ ಹೇಳುವಂತಿಲ್ಲ, ಕೇಳುವಂತಿಲ್ಲ ಎಂಬ ಪರಿಸ್ಥಿತಿ ಇದೆ. ತಕ್ಷಣ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಪೈಪ್‌ ದುರಸ್ತಿ ಮಾಡಿ ನೀರಿನ ವ್ಯರ್ಥ ಹರಿವನ್ನು ತಡೆಗಟ್ಟಬೇಕು. ಇಂದು ಉಳಿಸುವ ಒಂದು ಹನಿ ನೀರು, ನಾಳಿನ ಪೀಳಿಗೆಯ ಬದುಕಿನ ಆಧಾರ. ಹಾಗಾಗಿ ನೀರನ್ನು ಸಂರಕ್ಷಿಸುವುದು ಎಲ್ಲರ ಆದ್ಯತೆ ಎಂಬುದು ಸುದ್ದಿಒನ್ ಆಶಯ.

ನಿವೃತ್ತ ಭೂ ವಿಜ್ಞಾನಿ ಜೆ. ಪರುಶುರಾಮ ಅವರು ಸುದ್ದಿಒನ್ ನೊಂದಿಗೆ ಮಾತನಾಡುತ್ತಾ, ಭೂಗರ್ಭ ಜಲಮಟ್ಟ ದಿನೇ ದಿನೇ ಕಡಿಮೆಯಾತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದೆ. ಇದು ಕೇವಲ ಅಧಿಕಾರಿಗಳ ಜವಾಬ್ದಾರಿ ಅಷ್ಟೇ ಅಲ್ಲ. “ಪ್ರತಿ ಹನಿ ನೀರು ಅಮೂಲ್ಯ” ಎಂಬ ಅರಿವು ಪ್ರತಿಯೊಬ್ಬ ನಾಗರಿಕನಲ್ಲೂ ಮೂಡಬೇಕು. ನೀರನ್ನು ಜಾಗರೂಕತೆಯಿಂದ ಬಳಸಬೇಕು ಎಂದು ಅವರು ಹೇಳಿದರು.

ನೀರಿನ ವ್ಯರ್ಥತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು ನಾವು ಜಾಗರೂಕರಾಗದಿದ್ದರೆ, ನಾಳೆ ನೀರಿನ ಕೊರತೆಯ ಭಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಕ್ಷಣ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಪೈಪ್‌ ದುರಸ್ತಿ ಮಾಡಿ ನೀರಿನ ವ್ಯರ್ಥ ಹರಿವನ್ನು ತಡೆಗಟ್ಟಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನೀರು ವ್ಯರ್ಥವಾಗುತ್ತಿರುವ ಪ್ರಮುಖ ಕಾರಣಗಳು:
• ಸಾರ್ವಜನಿಕ ನಳಗಳ ನಿರ್ಲಕ್ಷ್ಯ: ರಸ್ತೆ ಬದಿಯ ನಲ್ಲಿಗಳು ಸರಿಯಾಗಿ ಬಂದ್ ಆಗದೆ ಅಥವಾ ತುಕ್ಕು ಹಿಡಿದು ದಿನವಿಡೀ ನೀರು ಪೋಲಾಗುತ್ತಿದೆ.
• ಪೈಪ್‌ಲೈನ್ ಸೋರಿಕೆ: ಹಳೆಯದಾದ ಪೈಪ್‌ಲೈನ್‌ಗಳು ಒಡೆದು ರಸ್ತೆಯಲ್ಲೇ ಹಳ್ಳದಂತೆ ನೀರು ಹರಿಯುತ್ತಿದ್ದರೂ ತಕ್ಷಣದ ದುರಸ್ತಿ ಕಾರ್ಯ ನಡೆಯುತ್ತಿಲ್ಲ.
• ಅನಗತ್ಯ ಬಳಕೆ: ವಾಹನ ತೊಳೆಯಲು, ರಸ್ತೆಗೆ ನೀರು ಹಾಕಲು ಮತ್ತು ಗಿಡಗಳಿಗೆ ಮಿತಿಮೀರಿ ಕುಡಿಯುವ ನೀರನ್ನು ಬಳಸುತ್ತಿರುವುದು.
• ಅಂತರ್ಜಲ ಕುಸಿತ: ಮಳೆ ನೀರು ಕೊಯ್ಲು (Rainwater Harvesting) ಮಾಡದ ಕಾರಣ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಪಾತಾಳಕ್ಕೆ ಇಳಿಯುತ್ತಿದೆ.

ಸಾರ್ವಜನಿಕರಿಗೆ ಮನವಿ: ನಾವು ಏನು ಮಾಡಬಹುದು?
• ಸೋರಿಕೆ ಕಂಡರೆ ದೂರು ನೀಡಿ: ನಿಮ್ಮ ಏರಿಯಾದಲ್ಲಿ ಪೈಪ್ ಒಡೆದಿದ್ದರೆ ಅಥವಾ ನಲ್ಲಿ ಸೋರುತ್ತಿದ್ದರೆ ಕೂಡಲೇ ಸಂಬಂಧಪಟ್ಟ ಗ್ರಾಮಪಂಚಾಯತಿ ಅಥವಾ ನಗರಸಭೆಗೆ ಮಾಹಿತಿ ನೀಡಿ.
• ಮಿತ ಬಳಕೆ ರೂಢಿಸಿಕೊಳ್ಳಿ: ಹಲ್ಲುಜ್ಜುವಾಗ ಅಥವಾ ಮುಖ ತೊಳೆಯುವಾಗ ನಲ್ಲಿಯನ್ನು ಅನಗತ್ಯವಾಗಿ ತೆರೆದಿಡಬೇಡಿ. ಬಕೆಟ್ ನೀರನ್ನು ಬಳಸಿ ಸ್ನಾನ ಮಾಡುವುದು ಉತ್ತಮ.
• ಮರುಬಳಕೆ ಮಾಡಿ: ತರಕಾರಿ ತೊಳೆದ ನೀರನ್ನು ಗಿಡಗಳಿಗೆ ಹಾಕಿ. ವಾಹನಗಳನ್ನು ಒದ್ದೆ ಬಟ್ಟೆಯಿಂದ ಒರೆಸುವ ಮೂಲಕ ಸಾವಿರಾರು ಲೀಟರ್ ನೀರು ಉಳಿಸಬಹುದು.
• ಬಳಸದೆ ಇರುವ ಟ್ಯಾಪ್‌ಗಳನ್ನು ತಕ್ಷಣ ಮುಚ್ಚಿರಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now