ಹಿರಿಯೂರು ನಗರಸಭೆಯಲ್ಲಿ ಚುನಾಯಿತ ಸದಸ್ಯರು ಹಾಗೂ ನಾಮ ನಿರ್ದೇಶನ ಸದಸ್ಯರ ನಡುವೆ ವಾಕ್ಸಮರ

2 Min Read

ಸುದ್ದಿಒನ್, ಹಿರಿಯೂರು, ಜುಲೈ. 25 : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚುನಾಯಿತ ಸದಸ್ಯರು ಹಾಗೂ ನಾಮ ನಿರ್ದೇಶನ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.

ನಗರದ ನಗರಸಭೆ ಕಾರ್ಯಲಯದ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಘಟನೆ ನುಡಿಯಿತು.

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ನೇಮಕಾತಿಯ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ಪ್ರತಿಯೊಬ್ಬ ನಗರಸಭೆ ಸದಸ್ಯರೂ ಒಬ್ಬೊಬ್ಬ ನೌಕರರನ್ನು ಸೂಚಿಸಿ ಎಂದಾಗ ನಾಮ ನಿರ್ದೇಶಿತ ಸದಸ್ಯರು ಹಳ್ಳಿಗಳ ನೌಕರರನ್ನು ಆಯ್ಕೆ ಮಾಡಬಾರದು. ನಮಗೂ ಸಲಹೆ ನೀಡುವ ಅಧಿಕಾರವಿದೆ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ಚುನಾಯಿತ ಸದಸ್ಯರು ಎಲ್ಲರೂ ಒಗ್ಗೂಡಿ ನೀವು ಸಲಹೆ ನೀಡಬೇಕಷ್ಟೆ, ಆಯ್ಕೆ ಸ್ವಾತಂತ್ರ್ಯ ನಮ್ಮದು ಎಂದು ಎಲ್ಲರೂ ಹೊರ ನಡೆಯಲು ಪ್ರಯತ್ನಿಸಿದರು. ಆಗ ಚುನಾಯಿತ ಸದಸ್ಯರಿಗೂ, ನಾಮ ನಿರ್ದೇಶಿತ ಸದಸ್ಯರಿಗೂ ಏರು ಧ್ವನಿಯ ವಾಗ್ವಾದ ನಡೆಯಿತು. ಮೊದಲು ನಾಮ ನಿರ್ದೇಶಿತ ಸದಸ್ಯರ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಅರಿಯಿರಿ ಎಂದು ಚುನಾಯಿತ ಸದಸ್ಯರು ತಿಳುವಳಿಕೆ ಹೇಳಿದರು. ಆದರೂ ಸಮಾಧಾನವಾಗದ ನಾಮ ನಿರ್ದೇಶಿತ ಸದಸ್ಯ ಎಸ್ ಎಲ್ ಶಿವಕುಮಾರ್ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು ಕುಳಿತಿದ್ದ ವೇದಿಕೆಯ ಕಟ್ಟೆ ಹತ್ತಿ ಪ್ರತಿಭಟಿಸಲು ಮುಂದಾದರು. ಮತ್ತೆ ಒಂದಷ್ಟು ಹೊತ್ತು ವಾದ ವಾಗ್ವಾದ ನಡೆದ ಮೇಲೆ ನಾಮ ನಿರ್ದೇಶಿತ ಸದಸ್ಯರ ಹಕ್ಕುಗಳ ಬಗ್ಗೆ ಪೌರಾಯುಕ್ತರು ವಿವರಿಸಿದರು. ನಂತರ ನಗರಸಭೆ ಸದಸ್ಯ ಬಿ ಎನ್ ಪ್ರಕಾಶ್ ರವರು ಮಾತನಾಡಿ ನಾಮ ನಿರ್ದೇಶಿತ ಸದಸ್ಯರ ಹಕ್ಕುಗಳ ಬಗೆಗಿನ ಕಾನೂನುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಮೊದಲೆಲ್ಲಾ ವಿದ್ವಾoಸರನ್ನು, ಸಂಗೀತಗಾರರನ್ನು, ಸಾಹಿತಿಗಳನ್ನು ಸಲಹೆ ಸೂಚನೆ ಕೊಡಲು ನೇಮಿಸುತ್ತಿದ್ದರು. ಅವರು ಸಲಹೆ ಸೂಚನೆ ಕೊಡಬಹುದಷ್ಟೇ. ಅದನ್ನು ಜಾರಿ ಮಾಡುವ ಅಧಿಕಾರ ಚುನಾಯಿತ ಕಮಿಟಿಗೆ ಇರುತ್ತದೆ. ಸಭೆಯಲ್ಲಿ ಸಲಹೆ ಸೂಚನೆ ಕೊಡಲು ಮುಂಚೆಯೇ ಇಂತಹ ವಿಷಯದ ಬಗ್ಗೆ ನಾನು ಸಲಹೆ ಕೊಡುತ್ತೇನೆ, ಮಾತನಾಡುತ್ತೇನೆ ಎಂದು ಅನುಮತಿ ಪಡೆದಿರಬೇಕು. ನಗರಸಭೆ ಸ್ಥಳೀಯ ಸರ್ಕಾರ ಇದ್ದಂತೆ.ಹೀಗೇ ಇಲ್ಲದ ಅಧಿಕಾರಕ್ಕಾಗಿ ಕಿತ್ತಾಡಿ ಸಭೆಯ ಉದ್ದೇಶ ಕೆಡಿಸುವುದು ಬೇಡ ಎಂದ ಮೇಲೆ ಎಲ್ಲರೂ ಸುಮ್ಮನಾದರು.

ಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರಾದ ಎಸ್ ಎಲ್ ಶಿವಕುಮಾರ್, ವಿ ಶಿವಕುಮಾರ್, ವಿ ಗಿರೀಶ್, ರಮೇಶ್ ಬಾಬು, ಅಜಿಂ ಪಾಷ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *