ಚಿತ್ರದುರ್ಗ, (ನವೆಂಬರ್.15) : ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ ಚಿಕ್ಕಸಿದ್ವವ್ವನಹಳ್ಳಿ ಸಮೀಪದ ಹೋ.ಚಿ.ಬೋರಯ್ಯ ಬಡಾವಣೆಯಲ್ಲಿ (ಕಾರೋಬನಹಟ್ಟಿ) ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಈಚೆಗೆ ಮನೆಯ ಗೋಡೆ ಕುಸಿದು ಮೂವರ ಮೃತಪಟ್ಟ ಕುಟುಂಬದ ಸದಸ್ಯರ ಮನೆಗೆ ಸೋಮವಾರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಹೋ.ಚಿ.ಬೋರಯ್ಯ ಬಡಾವಣೆಯಲ್ಲಿ ವಾಸವಾಗಿರುವ ಜನರಿಗೆ ಮನೆಕಟ್ಟಲಿಕ್ಕಾಗಿ ಅಂದಿನ ಹೋಚಿಬೋರಯ್ಯ ಎಂಬ ವ್ಯಕ್ತಿ ಅರ್ಧ ಎಕರೆ ಜಮೀನನ್ನು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ಈಗಾಗಲೇ ನೋಂದಣಿ ಮಾಡಿಸಿರುವುದರಿಂದ 94ಸಿ ಅವಶ್ಯಕತೆ ಇರುವುದಿಲ್ಲ. ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸರ್ವೇ ಮಾಡಿ ಅನುಮೋದನೆ ಪಡೆದು ಖಾತೆ ಮಾಡಿ ಮನೆ ಮಂಜೂರು ಮಾಡಿಕೊಡಬೇಕಾಗಿತ್ತು. ಆದರೆ ಆ ಕೆಲಸವಾಗಿಲ್ಲ. ಹಾಗಾಗಿ ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
ನ.16ರಂದು ಜಿಲ್ಲಾಧಿಕಾರಿಗಳು ಹೋ.ಚಿ.ಬೋರಯ್ಯನ ಬಡಾವಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ಸಿಗುವ ಸೌಲಭ್ಯ, ಧನಸಹಾಯದ ಸೌಲಭ್ಯ ನೀಡಲಿದ್ದಾರೆ ಎಂದರು.
ಸಾವು-ನೋವುಗಳು ಸಂಭವಿಸಿದಾಗ ತಕ್ಷಣ ಅವರಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಅದೇ ಮಾನವೀಯತೆ ಹಾಗೂ ಸರ್ಕಾರದ ಜವಾಬ್ದಾರಿ ಕೂಡ ಹೌದು ಎಂದು ಹೇಳಿದರು.
ಹೋ.ಚಿ.ಬೋರಯ್ಯ ಬಡಾವಣೆಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ತಕ್ಷಣವೇ ಅವರ ಹೆಸರಿಗೆ ಖಾತೆ ಮಾಡಬೇಕು. ಮನೆ ಹಕ್ಕುಪತ್ರ ವಿತರಣೆ ಹಾಗೂ ಹೊಸ ಮನೆಗಳ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ಅವರಿಗೆ ದೂರವಾಣಿ ಮೂಲಕ ಸಚಿವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಬೇಚಾರಕ್ ಗ್ರಾಮಗಳನ್ನು ಸರ್ವೇ ಮಾಡಿ, ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿ ಹಕ್ಕುಪತ್ರ ವಿತರಣೆ ಮಾಡುವಂತೆ ಈ ಹಿಂದೆ ಹಲವಾರು ಬಾರಿ ಸೂಚನೆ ನೀಡಿದ್ದೇನೆ. ಈ ಕಾರ್ಯ ಇನ್ನೂ ಮಂದಗತಿಯಲ್ಲಿ ಸಾಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಭೆ ಮಾಡುವಂತಿಲ್ಲ. ಚುನಾವಣೆ ಮುಗಿದ ನಂತರ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.