ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ನವೆಂಬರ್. 15b: ತಾಲೂಕಿನ ಚರ್ಮ ಕೈಗಾರಿಕೆ ಜಾಗ ಹಾಗೂ ಜನತಾ ಕಾಲೋನಿಯಲ್ಲಿರುವ ಚರ್ಮದ ಮಂಡಿ ಜಾಗ ಮತ್ತು ಜನತಾ ಕಾಲೋನಿ, ಮಸೀದಿ ಪಕ್ಕದಲ್ಲಿರುವ ಸಮುದಾಯ ಭವನವನ್ನು ವಕ್ಫ್ ಬೋರ್ಡ್ ಗೆ ಸೇರಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ನವೆಂಬರ್ 06, 2023ರಲ್ಲಿ ಚಳ್ಳಕೆರೆ ಜಾಮಿಯಾ ಮಸೀದಿ ವತಿಯಿಂದ ಅರ್ಜಿ ಸಲ್ಲಿಸಿದ್ದಾರೆ ಎಂಬ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಅ.28ರಂದು ಹರಿದಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಮುಸ್ಲಿಂ ಸಮುದಾಯದ ಮುಖಂಡ ಹೆಚ್ಎಸ್ ಸೈಯದ್ ಸ್ಪಷ್ಟನೆ ನೀಡಿದರು.
ನಗರದ ಶಾದಿ ಮಹಲ್ ನಲ್ಲಿ ಮುಸ್ಲಿಂ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಚಳ್ಳಕೆರೆ ನಗರದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಹೋದರತೆ ಭಾವದಿಂದ ಜೀವನ ನಡೆಸುತ್ತಿದ್ದು ಸಮುದಾಯಗಳ ನಡುವೆ ದ್ವೇಷ ಭಾವನೆ ಉಂಟುಮಾಡುವ ಉದ್ದೇಶದಿಂದ ಇಂತಹ ನಕಲಿ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಅಂಶಗಳು ಪತ್ರದಲ್ಲಿ ಇರುವುದನ್ನು ಗಮನಿಸಿದ ಜಿಲ್ಲಾ ವಕ್ ಮಂಡಳಿಯವರು ಚಳ್ಳಕೆರೆ ಜಾಮಿಯ ಮಸೀದಿಯವರ ಮೂಲಕ ಅ.30 ರಂದು ನಗರಸಭೆಗೆ ಅರ್ಜಿ ಸಲ್ಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರದ ಧೃಡೀಕರಣ ಪ್ರತಿಯನ್ನು ನೀಡಲು ಮನವಿ ಮಾಡಿತ್ತು ಅದರಂತೆ ಬುಧವಾರ ನಗರಸಭೆಯಿಂದ ಹಿಂಬರಹ ನೀಡಿದ್ದು ನಗರಸಭೆ ದಾಖಲಾತಿಗಳ ಪ್ರಕಾರ ಮನವಿಯಲ್ಲಿ ಕೋರಿರುವಂತೆ ನಗರಸಭೆಯಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರಕ್ಕೂ ನಗರ ಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ದಾದಾಪೀರ್, ಅಲ್ಲಭಕಾಶ್, ಎಸ್ ಪಿ ಜುಬೇರ್, ಖಲಾಮಿ, ಸಲೀಂ, ಅನ್ವರ್, ರಶೀದ್ ,ಮೌಲಾನ ನೂರುಲ್ಲಾ, ದಾವೂದ್ ಮೌಲಾನ, ಬಶೀರ್ ಹಯಾತ್ ಉಪಸ್ಥಿತರಿದ್ದರು.