ದೇಶದ ಅಭಿವೃದ್ಧಿಗೆ ಯುವ ಮತದಾರರ ಮತದಾನ ಕಡ್ಡಾಯ : ನ್ಯಾ. ಸಮೀರ್ ಪಿ ನಂದ್ಯಾಲ್

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 25 : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಘೋಷವಾಕ್ಯ ತಪ್ಪಾಗಿದೆ. ಇಂದಿನ ಮಕ್ಕಳು ಸಹ ಇಂದಿನ ಪ್ರಜೆಗಳೇ ಆಗಿದ್ದಾರೆ. ಎಲ್ಲ ಮಕ್ಕಳಿಗೂ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಎಂದು ಜೆ ಎಂ ಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ ನಂದ್ಯಾಲ್ ತಿಳಿಸಿದರು.

 

ನಗರದ ತಾಲೂಕು ಕಚೇರಿ ಆವರಣದಲ್ಲಿ ಚುನಾವಣೆ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿ, ಮತದಾನದ ದಿನ 18 ವರ್ಷ ಮೇಲ್ಪಟ್ಟ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತಂದಾಗ ಮಾತ್ರ ಶೇಕಡ ನೂರರಷ್ಟು ಮತದಾನ ವಾಗಲು ಸಾಧ್ಯವಾಗುತ್ತದೆ. ಮತದಾನದ ದಿನ ರಜೆ ನೀಡುವುದರಿಂದ ಮತದಾನ ಮಾಡದೆ ಪ್ರವಾಸಕ್ಕೆ ತೆರಳುವುದು ಗೀಳಾಗಿದೆ. ಅವಿದ್ಯಾವಂತರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ವಿದ್ಯಾವಂತರು ಮತದಾನದ ಬಗ್ಗೆ ನಿರಾಸಕ್ತಿ ತೋರಿಸುತಿರುವುದರಿಂದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಯುವ ಮತದಾರರು ಮುಂದಿನ ದಿನಗಳಲ್ಲಿ ಮತದಾನವನ್ನು ಕಡ್ಡಾಯವಾಗಿ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳ ಚುನಾವಣೆಗಳಲ್ಲಿ ವ್ಯಕ್ತಿಗಿಂತ ವಿಚಾರಗಳಿಗೆ ಮತ ಹಾಕಬೇಕು ಎಂಬ ನಿಲುವು ಮಾಧ್ಯಮಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ವ್ಯಕ್ತವಾಗುತ್ತಿದೆ. ಯುವ ಮತದಾರರು ಆಮಿಷಗಳಿಗೆ ಒಳಗಾಗದೆ ಮತ ನೀಡಿದಾಗ ಮಾತ್ರ ಜವಾಬ್ದಾರಿಯುತ ಜನಪ್ರತಿನಿಧಿ ಆಯ್ಕೆಯಾಗಿ ದೇಶದ ಅಭಿವೃದ್ಧಿಯಲ್ಲಿ ತೊಡಗುತ್ತಾರೆ. ಮಾನವನ ಜೀವನ ಮೊದಲು ವೀಲ್ಸ್ ಗಳಲ್ಲಿ ಪ್ರಾರಂಭವಾಗಿ ಇಂದು ವಾಟ್ಸಾಪ್ ಯುನಿವರ್ಸಿಟಿ ಯಾಗಿ ಮಾರ್ಪಟ್ಟಿದ್ದು ರೀಲ್ಸ್ ಗಳ ಮೂಲಕ ಜೀವನವನ್ನು ಅಧಃಪತನದತ್ತ ಸಾಗುತ್ತಿದ್ದೇವೆ. 2011 ರಿಂದ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ನನ್ನ ಮತ ನನ್ನ ಭಾರತ ಎಂಬ ಘೋಷ ವಾಕ್ಯದೊಂದಿಗೆ ಹದಿನಾರನೇ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅರ್ಹ ಎಲ್ಲಾ ಮತದಾರರು ಮತದಾನ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್‌. ಅಶ್ವತ ನಾಯಕ ಉಪಾಧ್ಯಕ್ಷರಾದ ಶ್ಯಾಮಲ ಮಾತನಾಡಿದರು. ಈ ವೇಳೆ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಓ ಹೆಚ್ . ಶಶಿಧರ್ ತಹಸೀಲ್ದಾರ್ ರೆಹಾನ್ ಪಾಷ, ಸರ್ಕರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ ವೀರೇಶ್, ರೇಷ್ಮಾ ಹಾನಗಲ್, ಬಿಇಓ ಕೆ ಎಸ್ .ಸುರೇಶ್ ಆಹಾರ ನಿರೀಕ್ಷಕ ಶ್ರೀನಿವಾಸ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ದೇವಲ ನಾಯ್ಕ್ ಬಿಸಿಎಂ ಅಧಿಕಾರಿ ರಮೇಶ್ ,ಶಿವರಾಜ್ ತಾಲ್ಲೂಕಿ ಕಚೇರಿ ಶ್ರೀನಿವಾಸ್ ಸೇರಿದಂತೆ ಹಾಸ್ಟನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article