ವಿಜಯಪುರ: ಇಂದು 2023ರ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಶಾಂತಿಯುತ ಮತದಾನ ನಡೆಸಬೇಕೆಂದು ಚುನಾವಣಾ ಆಯೋಗ ಕೂಡ ಮನವಿ ಮಾಡಿದೆ. ಜೊತೆಗೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಿದೆ. ಆದರೂ ಅಲ್ಲಲ್ಲಿ ಕೆಲವು ಘಟನೆಗಳು ನಡೆದಿವೆ. ಅದರಲ್ಲಿ ವಿಜಯಪುರದಲ್ಲಿ ಇವಿಎಂ ಮೆಷಿನ್ ಅನ್ನೇ ಕಿತ್ತೆಸೆದ ಘಟನೆ ನಡೆದಿದೆ. ಬಸವನಬಾಗೇವಾಡಿ ತಾಲೂಕಿನ ಮಸಬನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮತಯಂತ್ರಗಳನ್ನು ಬಿಸನಾಳ, ಡೋಣೂರು ಗ್ರಾಮದಿಂದ ವಿಜಯಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತಾ ಇತ್ತು. ಇದನ್ನು ಅಲ್ಲಿನ ಗ್ರಾಮಸ್ಥರು ತಪ್ಪಾಗಿ ಅರ್ಥ ಮಾಡಿಕೊಂಡು ಇಂಥ ದುರ್ಘಟನೆಗೆ ಸಾಕ್ಷಿಯಾಗಿದ್ದಾರೆ. ವೋಟಿಂಗ್ ಸಮಯದಲ್ಲಿ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ತಿಳಿದ ಗ್ರಾಮಸ್ಥರು, ಆ ಮೆಷಿನ್ ಗಳನ್ನೇ ಕಿತ್ತು, ಒಡೆದು ಹಾಕಿದ್ದಾರೆ.
ಮತಯಂತ್ರಗಳನ್ನು ತರುತ್ತಿದ್ದಾಗ ಅಲ್ಲಿನ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಸರಿಯಾದ ಉತ್ತರ ನೀಡದೆ ಇದ್ದಾಗ ಗ್ರಾಮಸ್ಥರು ಕೆರಳಿ ಕೆಂಡವಾಗಿದ್ದಾರೆ. ಅವರು ಉತ್ತರ ಕೊಡದೆ ಇದ್ದಾಗ ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ. ಅವುಗಳು ರಿಸರ್ವ್ ಮತಯಂತ್ರಗಳಾಗಿದೆ. ಒಂದು ವೇಳೆ ಎಲ್ಲಾದರೂ ಮತಯಂತ್ರಗಳು ಕೆಟ್ಟರೆ, ಕೈಕೊಟ್ಟರೆ ಇವುಗಳನ್ನು ಬಳಕೆ ಮಾಡಲು ಸಂಗ್ರಹ ಮಾಡಲಾಗಿರುತ್ತೆ. ಆದರೆ ಇವುಗಳನ್ನೇ ಒಡೆದು ಹಾಕಿದ್ದಾರೆ. ಸದ್ಯ ಮಸಬನಾಳ ಗ್ರಾಮದಲ್ಲಿ ಮತದಾನ ಸ್ಥಗಿತಗೊಂಡಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸಿದ್ದಾರೆ. ಬಳಿಕ ಮತದಾನ ಮತ್ತೆ ಆರಂಭವಾಗಲಿದೆ.