ಚಿತ್ರದುರ್ಗ, (ನವೆಂಬರ್.06) : ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ-2022ರ ಸಂಬಂಧ ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ.
ನವೆಂಬರ್ 08ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ನವೆಂಬರ್ 08 ರಿಂದ ಡಿಸೆಂಬರ್ 8 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನವೆಂಬರ್ 14, 21, 28ರ ಭಾನುವಾರದಂದು ಮಿಂಚಿನ ನೋಂದಣಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 27 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ತೀರ್ಮಾನಿಸಲಾಗುವುದು. 2022ರ ಜನವರಿ 13ರಂದು ಮತದಾರರ ಅಂತಿಮ ಪಟ್ಟಿಗಳ ಪ್ರಕಟಿಸಲಾಗುತ್ತದೆ.
2022ರ ಜನವರಿ 1ಕ್ಕೆ 18ವರ್ಷ ಪೂರ್ಣಗೊಳ್ಳುವವರು ಹಾಗೂ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟುಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಬೇರೆ ಮತಗಟ್ಟೆ/ಕ್ಷೇತ್ರಕ್ಕೆ ವರ್ಗಾಹಿಸಬೇಕಾಗಿದ್ದಲ್ಲಿ ನಿಗದಿಪಡಿಸಿರುವ ನಮೂನೆಗಳಾದ 6,7,8 ಮತ್ತು 8ಎ ಗಳಲ್ಲಿ ಅರ್ಜಿಯನ್ನು ಭರ್ತಿ ಮಾಡಿ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳವರ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ.
ಅಲ್ಲದೇ ಭಾರತ ಚುನಾವಣಾ ಆಯೋಗವು ಹೊಸದಾಗಿ ಮತದಾರರ ಸಹಾಯವಾಣಿ (voter help line App) ನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಮತದಾರರ ಸಹಾಯವಾಣಿ (Voter help line App) ಮುಖಾಂತರವೇ ಆನ್‍ಲೈನ್‍ನಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.