ಮತದಾನ ಜಾಗೃತಿ ಹಾಗೂ ಪರಿಷ್ಕರಣೆ ಕಾರ್ಯಕ್ರಮ : ಮತದಾರರ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಚಾಲನೆ

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ನ.09) : ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಬುಧವಾರ ಏರ್ಪಡಿಸಿದ ಮತದಾರರ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಹಸಿರು ನಿಶಾನೆ ತೋರಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮತದಾರರ ಜಾಗೃತಿ ಜಾಥಾ ನಡೆಯಿತು.

ಮತದಾರರ ಜಾಗೃತಿ ಜಾಥಾದಲ್ಲಿ ಖಚಿತಪಡಿಸಿ… ಖಚಿತಪಡಿಸಿ…ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ?, ನಿಮ್ಮ ಹೆಸರು ನೊಂದಾಯಿಸಲು ನಮೂನೆ 6 ಬಳಸಿ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7 ಬಳಸಿ, ಮತದಾರರ ಪಟ್ಟಿಯ ಮಾಹಿತಿ ತಿದ್ದುಪಡಿಗಾಗಿ ನಮೂನೆ 8 ಬಳಸಿ, ಯಾವುದೇ ಮತದಾರ ಮತಪಟ್ಟಿಯಿಂದ ಹೊರಗುಳಿಯಬಾರದು, 18 ವರ್ಷ ಪೂರೈಸಿದ ಎಲ್ಲ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಮತದಾರರಾಗಿ ನೊಂದಾಯಿಸಿಕೊಳ್ಳಲು ಈಗ ವರ್ಷಕ್ಕೆ ಒಂದಲ್ಲ 4 ಅವಕಾಶಗಳು, ಬಳಸಿ… ಬಳಸಿ… ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೊಂದಾಯಿಸಲು ಚುನಾವಣೆ ಸಂಬಂಧಿತ ಸಂದೇಹಗಳಿಗೆ 1950ರ ಮತದಾರರ ಸಹಾಯವಾಣಿಗೆ ಕರೆ ಮಾಡಿ, ನೋಂದಾಯಿಸಿ… ನೋಂದಾಯಿಸಿ.. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ ಎಂಬ ಭಿತ್ತಿಫಲಕಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡ ಮತದಾರರ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರ, ಎಸ್‍ಬಿಐ ವೃತ್ತ ಹಾಗೂ ಗಾಂಧಿವೃತ್ತದ ಮೂಲಕ ಸಂಚರಿಸಿ ನಂತರ ಮತ್ತೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಂಗಳಮುಖಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಇದ್ದರು.

ಮತದಾನದ ಜಾಗೃತಿ ಮೂಡಿಸಲು ರಂಗುರಂಗಿನ ರಂಗೋಲಿ: ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಆಯೋಜಿಸಿದ್ದ ರಂಗುರಂಗಿನ ರಂಗೋಲಿಯು ಮತದಾನದ ಮಹತ್ವ ಸಾರಿತು.   ಅಲ್ಲದೆ ಮತದಾನ ಜಾಗೃತಿಗಾಗಿ ಅನೇಕ ರೀತಿಯ ರಂಗೋಲಿ ಚಿತ್ತಾರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು ಬಿಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ರಂಗೋಲಿಯಲ್ಲಿ ಮತಯಂತ್ರ, ಚುನಾವಣಾ ಆಯೋಗದ ಲಾಂಛನ, ಮತದಾನ ಮಾಡಿದ ತೋರುಬೆರಳು, ವೋಟ್ ಫಾರ್ ಬೆಟರ್ ಇಂಡಿಯಾ, ಮತ ನಮ್ಮ ಹಕ್ಕು-ಮಾರಾಟಕ್ಕಲ್ಲ, ತಪ್ಪದೇ ಮತ ಚಲಾಯಿಸಿ, ಮಸ್ಟ್ ವೋಟ್, ವಾಯ್ಸ್ ಆಫ್ ದಿ ಪೀಪಲ್-ಒಂದು ಕ್ಯಾಂಡಲ್ ನಿಮ್ಮ ರಾತ್ರಿ ಬೆಳಗಿಸುತ್ತದೆ. ಒಂದು ವೋಟ್ ನಿಮ್ಮ ಜೀವನ ಬೆಳಗಿಸುತ್ತದೆ, ನಿಮ್ಮ ಮತ ಅಮೂಲ್ಯ, ನಮ್ಮ ಮತ ನಮ್ಮ ಹಕ್ಕು, ಕಡ್ಡಾಯ ಮತದಾನದ ಮೂಲಕ ಗಣರಾಜ್ಯದ ದೀಪ ಬೆಳಗೋಣ ಸೇರಿದಂತೆ ವಿವಿಧ ರೀತಿಯ ಮತ ಜಾಗೃತಿಯ ಚಿತ್ರಗಳನ್ನು ಬಿಡಿಸಿದ ಮತದಾನ ಜಾಗೃತಿಯ ಘೋಷವಾಕ್ಯಗಳು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್ ಅವರು ಮತದಾನದ ಮಹತ್ವ ಸಾರುವ ರಂಗುರಂಗಿನ ರಂಗೋಲಿ ಚಿತ್ತಾರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಅಲ್ಲದೆ ಮತದಾನದ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗಳು ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!