ಚಿತ್ರದುರ್ಗ,(ಸೆಪ್ಟೆಂಬರ್. 17) : ವಿಶ್ವಕರ್ಮ ಸಮುದಾಯ ವಿಶ್ವಕ್ಕೆ ಅವಶ್ಯಕವಾಗಿರುವ ಸುಂದರವಾದ ಸೃಷ್ಠಿಗಳನ್ನು ಹಾಗೂ ದೇಶಕ್ಕೆ ಮಾದರಿಯಾದ ಕೊಡುಗೆ ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಮಾಜ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ವಿಶ್ವಕರ್ಮ ಸಮುದಾಯವು ಬಹಳಷ್ಟು ಕ್ಷೇತ್ರಗಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದು, ಪುರಾಣ, ಇತಿಹಾಸ ಹೊಂದಿರುವ ಹಾಗೂ ಭವ್ಯ ಪರಂಪರೆಯ ಸಮಾಜ ವಿಶ್ವಕರ್ಮ ಸಮುದಾಯವಾಗಿದೆ. ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಠಿಯ ಮೂಲ. ಬ್ರಹ್ಮ ಸ್ವರೂಪಿಯಾದ ವಿಶ್ವಕರ್ಮ ಅವರು ವಿಶ್ವಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅಖಿಲ ಭಾರತ ವಿಶ್ವಕರ್ಮ ಪರಿಷತ್ತು ಪ್ರಧಾನ ಕಾರ್ಯದರ್ಶಿ ಎನ್.ಸತ್ಯನಾರಾಯಣಚಾರ್ ಉಪನ್ಯಾಸ ನೀಡಿ, ವಿಶ್ವಕರ್ಮ ಎಂದರೆ ಎಲ್ಲವನ್ನೂ ಬಲ್ಲವನು, ಎಲ್ಲವನ್ನೂ ಸಾಧಿಸುವವನು ಎಂದು ಸಂಸ್ಕøತದಲ್ಲಿ ಉಲ್ಲೇಖಿಸಲಾಗಿದೆ. 64 ವಿದ್ಯೆಗಳ ಅಧಿಪತಿ ವಿಶ್ವಕರ್ಮನಾಗಿದ್ದಾನೆ. ವಿಶ್ವಕರ್ಮನನ್ನು ಬ್ರಹ್ಮನಿಗೆ ಹೋಲಿಸಲಾಗುತ್ತದೆ. ಬ್ರಹ್ಮ ಮತ್ತು ವಿಶ್ವಕರ್ಮ ಇಬ್ಬರು ಸೃಷ್ಠಿ ಕರ್ತರೇ ಎಂದು ತಿಳಿಸಿದರು.
ವಿಮಾನದ ಪರಿಕಲ್ಪನೆ ಇಲ್ಲದ ಸಂದರ್ಭದಲ್ಲಿ ಪುಷ್ಪಕ ವಿಮಾನವನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆ ವಿಶ್ವಕರ್ಮನಿಗೆ ಸಲ್ಲುತ್ತದೆ. ಕಲೆ ಮಾತ್ರವಲ್ಲದೇ, ಇತರೆ ಸಾಮಾಗ್ರಿಗಳನ್ನೂ, ಶಸ್ತ್ರಾಸ್ತ್ರಗಳನ್ನೂ, ಯಂತ್ರೋಪಕರಣಗಳನ್ನು ವಿನ್ಯಾಸಗೊಳಿಸಿ, ರಾಷ್ಟ್ರದ ಅಭಿವೃದ್ಧಿಗೆ ವಿಶ್ವಕರ್ಮ ಕೊಡುಗೆ ನೀಡಿದ್ದಾರೆ ಎಂದರು.
ವಿಶ್ವಕರ್ಮ ಸಮುದಾಯಕ್ಕೆ ಶಿಕ್ಷಣ ಹಾಗೂ ಹೊಸ ತಂತ್ರಜ್ಞಾನದ ತರಬೇತಿ ನೀಡಿ, ಸಮುದಾಯಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ವಡ್ಡನಹಾಳು ಕಾಶಿ ಮಠದ ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠದ ಅಷ್ಟೋತ್ತರ ಶತ ಶ್ರೀಶಂಕರಾತ್ಮಾನಂದ ಸರಸ್ವತೀ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ವಿಶ್ವಕರ್ಮ ಜಯಂತಿ ಕೇವಲ ವಿಶ್ವಕರ್ಮ ಸಮಾಜದವರು ಮಾತ್ರ ಮಾಡುವಂತಹ ಜಯಂತಿ ಅಲ್ಲ. ಅದು ಎಲ್ಲ ಸಮಾಜದವರು ಮಾಡಬೇಕಾಗಿರುವಂತಹ ಜಯಂತಿ ಯಾಕೆಂದರೆ ವಿಶ್ವಕರ್ಮ ವಿಶ್ವವನ್ನು ಸೃಷ್ಠಿ ಮಾಡಿದವನು ಹಾಗಾಗಿ ಎಲ್ಲರೂ ಸಹ ವಿಶ್ವಕರ್ಮನನ್ನು ಆರಾಧಿಸಬೇಕು. ವಿಶ್ವಕರ್ಮ ಸಮಾಜದವರು ಶಿಲ್ಪ ಕಲೆಯಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಎ.ಶಂಕರಾಚಾರ್, ಉಪಾಧ್ಯಕ್ಷ ಮಲ್ಲಿನಾಥಚಾರ್, ಪ್ರಧಾನ ಕಾರ್ಯದರ್ಶಿ ಗೋವರ್ಧನ್, ಅಖಿಲ ಭಾರತ ವಿಶ್ವಕರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ನಾಮನಿರ್ದೇಶನ ಸದಸ್ಯ ರಮೇಶಾಚಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶಿವಣ್ಣಾಚಾರ್, ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಮುಖಂಡರಾದ ಹೆಚ್.ಪಿ.ರಾಜಣ್ಣಾಚಾರ್ ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಉಮೇಶ್ ಪತ್ತಾರ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.