ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಬಡ ಸಮುದಾಯಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಸರ್ಕಾರಕ್ಕೆ ವಿಶ್ವಕರ್ಮ ಜಾಗೃತಿ ಸಮಾವೇಶದ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತೇವೆಂದು ಚನ್ನಗಿರಿ ತಾಲ್ಲೂಕು ವಡ್ನಾಳ ವಿಶ್ವಕರ್ಮ ಸಾವಿತ್ರಿ ಪೀಠದ ಶಂಕರಾತ್ಮಾನಂದಸ್ವಾಮೀಜಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಹಾಗೂ ಜಿಲ್ಲೆಯ ನಮ್ಮ ಸಮಾಜದ ಹಲವು ಸಂಘಟನೆಗಳ ಸಹಭಾಗಿತ್ವದಲ್ಲಿ ಜು.11 ರಂದು ದಾವಣಗೆರೆಯಲ್ಲಿ ನಡೆಯುವ ವಿಶ್ವಕರ್ಮ ಜಾಗೃತಿ ಸಮಾವೇಶದಲ್ಲಿ ಜನಾಂಗದ ಸರ್ವ ಮಠಾಧಿಪತಿಗಳ ಮತ್ತು ಪೀಠಾಧಿಪತಿಗಳ ಸಮ್ಮೇಳನ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, ವಿಶ್ವಕರ್ಮ ಸಮುದಾಯದ ಕಾಳಿಕಾ ದೇವಸ್ಥಾನ ಇತರೆ ದೇವಸ್ಥಾನಗಳ ಅರ್ಚಕರು ಪುರೋಹಿತರುಗಳಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಹೇಳಿದರು.
ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು, ಈಗಿನ ಬಿಜೆಪಿ.ಸರ್ಕಾರ ವಿಶ್ವಕರ್ಮ ಸಮುದಾಯವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಕೀಳಾಗಿ ಕಾಣುತ್ತಿದೆ. ಅಧಿಕಾರ ಬೇಕಾದಾಗ ನಮ್ಮ ಬೆಂಬಲ ಬೇಡುತ್ತಾರೆ. ಅಧಿಕಾರ ಸಿಕ್ಕ ನಂತರ ಸಮುದಾಯದ ಕಡೆ ತಿರುಗಿಯೂ ನೋಡುವುದಿಲ್ಲ.
ರಾಜ್ಯದಲ್ಲಿ 42 ಲಕ್ಷದಷ್ಟು ವಿಶ್ವಕರ್ಮ ಸಮುದಾಯದವರಿದ್ದಾರೆ. ಸಮಾವೇಶದ ಮುಖಾಂತರ ಎಲ್ಲಾ ಪಕ್ಷದ ನಾಯಕರುಗಳಿಗೆ ಸಂದೇಶ ನೀಡುತ್ತೇವೆ. ಕಳೆದ ಎರಡು ವರ್ಷ ಕೊರೋನಾದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರಗಳು ಬೇರೆ ಬೇರೆ ಸಮುದಾಯಕ್ಕೆ ಸೌಲಭ್ಯ ನೀಡಿ ವಿಶ್ವಕರ್ಮ ಸಮುದಾಯವನ್ನು ಕಡೆಗಣಿಸಿರುವುದು ನಮ್ಮ ಮನಸ್ಸಿಗೆ ನೋವುಂಟಾಗಿದೆ. ಮುಂದಿನ ಡಿಸೆಂಬರ್ ಇಲ್ಲವೇ ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆಂದರು.
ವಿಶ್ವಕರ್ಮ ಸಮುದಾಯದ ಮುಖಂಡರಾದ ಎಲ್.ನಾರಾಯಣಚಾರ್ ಮಾತನಾಡಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವಿಶ್ವಕರ್ಮ ಸಮುದಾಯದ ಜಯಂತಿಯನ್ನು ಘೋಷಿಸಿ ಅಭಿವೃದ್ದಿ ನಿಗಮ ಸ್ಥಾಪಿಸಿದರು.
ಬಿ.ಎಸ್.ಯಡಿಯೂರಪ್ಪನವರು ನಂಜುಂಡಿಯನ್ನು ಎಂ.ಎಲ್.ಸಿ.ಮಾಡಿದರು. ಅದೇ ರೀತಿ ದಿವಂಗತ ಡಿ.ದೇವರಾಜ ಅರಸುರವರನ್ನು ವಿಶ್ವಕರ್ಮ ಸಮುದಾಯ ನೆನಪಿಸಿಕೊಳ್ಳಲೇಬೇಕು. ನಮ್ಮ ಸಮುದಾಯದಲ್ಲಿ 41 ಉಪಜಾತಿಗಳಿವೆ. ಎಲ್ಲರೂ ಒಗ್ಗಟ್ಟಾಗಿ ಜು.11 ರಂದು ದಾವಣಗೆರೆಯಲ್ಲಿ ನಡೆಯುವ ವಿಶ್ವಕರ್ಮ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ವಿಶ್ವಕರ್ಮ ಸಮುದಾಯದ ದಾವಣಗೆರೆ ಜಿಲ್ಲಾಧ್ಯಕ್ಷ ಮೌನೇಶಾಚಾರ್ ಮಾತನಾಡಿ ವಿಶ್ವಕರ್ಮ ಸಮುದಾಯದವರನ್ನು ಶಿಕ್ಷಣ, ಸಂಘಟನೆ, ಹೋರಾಟದ ಬಗ್ಗೆ ಜಾಗೃತಿಗೊಳಿಸುವುದಕ್ಕಾಗಿ ಸಮಾವೇಶ ಹಮ್ಮಿಕೊಂಡಿದ್ದು, ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅರ್ಚಕರಿಗೆ, ಶಿಲ್ಪಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದಕ್ಕಾಗಿ ನಮ್ಮ ಸಮುದಾಯದ ಹಿರಿಯರು ರಾಜ್ಯದ 29 ಜಿಲ್ಲೆಗಳಲ್ಲಿ ಸುತ್ತಾಡಿದ್ದಾರೆ. ಬೇರೆ ಬೇರೆ ಜಾತಿಯ ಅಭಿವೃದ್ದಿ ನಿಗಮಗಳಿಗೆ ಐದುನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ಸರ್ಕಾರ ವಿಶ್ವಕರ್ಮ ಸಮುದಾಯದ ಅಭಿವೃದ್ದಿ ನಿಗಮಕ್ಕೆ ಕನಿಷ್ಟ ನೂರರಿಂದ ಇನ್ನೂರು ಕೋಟಿ ರೂ.ಗಳನ್ನಾದರೂ ಮಂಜೂರು ಮಾಡಲಿ ಇದರಿಂದ ಸಮುದಾಯದ ಅನೇಕರು ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ಅಖಿಲ ಭಾರತ ವಿಶ್ವಕರ್ಮ ಪರಿಷತ್‍ನ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಎಂ.ಶಂಕರಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.