ವಿಶ್ವದಾಖಲೆಯತ್ತ ತುರುವನೂರಿನ ವಿರಾಟ್ ಆಂಜನೇಯ ರೇಖಾಚಿತ್ರ : ಇಂದು ಲೋಕಾರ್ಪಣೆ

suddionenews
2 Min Read

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 12 : ತಾಲ್ಲೂಕಿನ ತುರುವನೂರು ಗ್ರಾಮ ಕಳೆದ ಕೆಲವು ದಿನಗಳಿಂದ ಬಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಪೊಲೀಸ್ ಠಾಣೆ ಸಮೀಪದ ಐದು ಎಕರೆ ವಿಶಾಲ ಜಾಗದಲ್ಲಿ ವಿರಾಟ್ ಆಂಜನೇಯ ರೇಖಾಚಿತ್ರ ಮೂಡಿದ್ದು, ಅತ್ಯಂತ ಆಕರ್ಷಣೀಯವಾಗಿದ್ದು ಎಲ್ಲರ ಬಾಯಲ್ಲೂ ಇದೇ ಸುದ್ದಿ, 

ಬೆಂಗಳೂರಿನಲ್ಲಿನ ಸಾಯಿ ಕ್ಯಾಡ್ ಸಂಸ್ಥೆ ಸಂಸ್ಥಾಪಕರಾದ ಎಂ.ಮಂಜುನಾಥ್ ರೆಡ್ಡಿ, ಎಂ.ಸಿ.ಪ್ರತಿಮಾ ರೆಡ್ಡಿ ದಂಪತಿ ತಮ್ಮ ಸ್ವಂತ ಊರನ್ನು ವಿಶ್ವವೇ ಗಮನಿಸುವ ರೀತಿ ಮಾಡಬೇಕೆಂಬ ಮಹಾದಾಸೆಯಿಂದ ಹೊರಹೊಮ್ಮಿದ ವಿರಾಟ್ ಆಂಜನೇಯನ ದೊಡ್ಡ ರೇಖಾಚಿತ್ರ ಇದೀಗ ತುರುವನೂರಿನ ಹೆಸರನ್ನು ಎಲ್ಲೆಡೆ ಗಮನ ಸೆಳೆಯುವಂತೆ ಮಾಡಿದ್ದಾರೆ.

ಆರೇಳು ತಿಂಗಳುಗಳ ಕಾಲ ಶ್ರಮಪಟ್ಟು 800ಕ್ಕೂ ಹೆಚ್ಚು ಮಾದರಿಗಳನ್ನು ತಯಾರಿಸಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ತುರುವನೂರು ಗ್ರಾಮದ ನೆಲದಲ್ಲಿ ಚಿತ್ರಿಸುವ ಕೆಸಲವನ್ನು ಈ ತಂಡ ಯಶಸ್ವಿಯಾಗಿ ಮಾಡಿ ಪೂರ್ಣಗೊಳಿಸಿದೆ. ಇದಕ್ಕಾಗಿ ಸ್ವಂತ 10 ಲಕ್ಷ ರೂ. ವೆಚ್ಚ ಮಾಡಿದ್ದಾರೆ.
ಈ ಕಾರ್ಯಕ್ಕೆ ಗ್ರಾಮಸ್ಥರು, ಐಟಿಐ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಬೆಂಬಲವಾಗಿ ನಿಂತಿದ್ದರ ಫಲ, ಈಗ ಸುಂದರವಾದ ವಿರಾಟ್ ಹನುಮಂತನ ಭಾವಚಿತ್ರ ನೆಲದಲ್ಲಿ ಮೂಡಿದೆ.

ಸಂಘಟಕರು ಡ್ರೋನ್ ಮೂಲಕ ಚಿತ್ರಗಳನ್ನು ಸೆರೆಹಿಡಿದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಗ್ರಾಮಕ್ಕೆ ವಿವಿಧ ಭಾಗಗಳಿಂದ ಭಕ್ತರು ಹರಿದುಬರುತ್ತಿದ್ದಾರೆ. ರೇಖಾಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರೇಖಾಚಿತ್ರದ ತಾಂತ್ರಿಕ ವಿವರ, ಯೋಜನೆಗಳು, ತಂಡದ ಕಾರ್ಯವನ್ನು ಜಿಯೋ ಟ್ಯಾಗ್ ಫೋಟೋ ಮೂಲಕ ಚಿತ್ರೀಕರಿಸಿಕೊಂಡು, 350 ಮೀಟರ್ ಎತ್ತರದಿಂದ ಡ್ರೋನ್ ಮೂಲಕ ವಿರಾಟ್ ಆಂಜನೇಯನ ಅತ್ಯಾಕರ್ಷಕ ರೇಖಾಚಿತ್ರ ಸೆರೆ ಹಿಡಿಯಲಾಗಿದೆ. ಇವೆಲ್ಲವೂ ಲಿಮ್ಕಾ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ಗೆ ಸಲ್ಲಿಕೆ ಆಗಲಿದೆ.

ಫೆ.13ರಂದು ರಥೋತ್ಸವ: ಗ್ರಾಮದಲ್ಲಿ ಫೆ.13ರ ಗುರುವಾರ ಆಂಜನೇಯ ರಥೋತ್ಸವ ನಡೆಯಲಿದ್ದು, ಜಾತ್ರೋತ್ಸವಕ್ಕೆ ಈ ಬಾರಿ ವೀರಾಂಜನೇಯನ ರೇಖಾಚಿತ್ರ ಮೆರುಗು ನೀಡಿದೆ.

ಇಂದು ಉದ್ಘಾಟನೆ ಮತ್ತು ಲೋಕಾರ್ಪಣೆ : ಐದು ಎಕರೆ ವಿಶಾಲೆ ಜಾಗದಲ್ಲಿ ಮೂಡಿರುವ ವೀರಾಂಜನೇಯನ ರೇಖಾಚಿತ್ರ ಆಕರ್ಷಿಕತವಾಗಿದೆ. ಇಂದು ( ಫೆ.12ರ ಬುಧವಾರ) ಉದ್ಘಾಟನೆಗೊಳ್ಳಲಿದ್ದು, ಈ ಮೂಲಕ ಜನರ ವೀಕ್ಷಣೆಗೆ ಅವಕಾಶ ದೊರೆಯಲಿದೆ. ಈ ಕಾರ್ಯಕ್ಕೆ ಸಾಹಸಿಗ ಜ್ಯೋತಿರಾಜ್ ಚಾಲನೆ ನೀಡಲಿದ್ದಾರೆ. ಈ ವೇಳೆ ಊರಿನ ಪ್ರಮುಖರು, ಗಣ್ಯವ್ಯಕ್ತಿಗಳು ಆಗಮಿಸಲಿದ್ದಾರೆ. ವೀಕ್ಷಣೆ ಮಾಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಆಂಜನೇಯ ರೇಖಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೊಬೈಲ್‍ಗಳಲ್ಲಿ, ಸ್ಟೇಟಸ್ ಗಳಲ್ಲಿ ಹರಿದಾಡುತ್ತಿದೆ.

ಕನಸು ನನಸಾಗಿದೆ: ನಮ್ಮ ಕನಸು ನನಸಾಗಿದೆ. ಆರಂಭದಲ್ಲಿ ಆತಂಕ ಇತ್ತು. ಬಳಿಕ ಗ್ರಾಮಸ್ಥರ ಸಹಕಾರ, ದೇವರ ಕೃಪೆ, ಭಕ್ತರ ಬೆಂಬಲದಿಂದ ಈ ಕಾರ್ಯ ಸಾಧ್ಯವಾಗಿದೆ. ವೀರಾಂಜನೇಯನ ರೇಖಾಚಿತ್ರಕ್ಕೆ ತಾಂತ್ರಿಕ ಸ್ಪರ್ಶ ನೀಡಿದ್ದು, ಡ್ರೋನ್ ಮೂಲಕ ಸೆರೆಹಿಡಿದ ಚಿತ್ರ ನಮ್ಮಲ್ಲಿ ಆತ್ಮತೃಪ್ತಿ ಮೂಡಿಸಿದೆ ಎನ್ನುತ್ತಾರೆ ಇಂಜಿನಿಯರ್ ಎಂ.ಮಂಜುನಾಥ್ ರೆಡ್ಡಿ.

ಹಲವರ ಶ್ರಮ: ದೇವರ ಕಾರ್ಯಕ್ಕೆ ಸಿವಿಲ್ ಇಂಜಿನಿಯರ್‍ಗಳಾದ ರಜತ್ ದಿವ್ಯದಿ, ಸೇವಂತ್ ಗೌಡ, ಸಚಿನ್, ತುರುವನೂರಿನ ವಿಶ್ವೇಶ್ವರ ಐಟಿಐ ಕಾಲೇಜ್ ಸಂಸ್ಥಾಪಕ ಜನಾರ್ಧನ್, ಮೋಹನ್ ಹಾಗೂ ವಿದ್ಯಾರ್ಥಿಗಳು, ಬಜರಂಗದಳದ ಪ್ರಭಂಜನ್ ಸೇರಿ ಬಹಳಷ್ಟು ಮಂದಿ ಹಗಲು-ರಾತ್ರಿ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನೋಬೆಲ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಲಭಿಸಲಿದೆ ಎನ್ನುತ್ತಾರೆ ಇಂಜಿನಿಯರ್ ಎಂ.ಸಿ.ಪ್ರತಿಮಾರೆಡ್ಡಿ.

Share This Article
Leave a Comment

Leave a Reply

Your email address will not be published. Required fields are marked *